ಧಾರವಾಡ : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಮಠಾಧೀಶರು ಬೆಂಬಲ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾ ಸಹ ಬಿಎಸ್‌ವೈ ಪರವಾಗಿ ಬ್ಯಾಟ್ ಬೀಸಿದೆ.
ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಯಾವುದೇ ಕಾರಣಕ್ಕೂ ಬಿಎಸ್‌ವೈ ಅವರನ್ನು ಬದಲಾಯಿಸಬಾರದು. ಅವರು ಮೋದಿ ಶಕ್ತಿಯಿಂದ ಅಧಿಕಾರಕ್ಕೆ ಬಂದಿಲ್ಲ. ವೈಯಕ್ತಿಕ ಶಕ್ತಿ ಮತ್ತು ವರ್ಚಸ್ಸಿನ ಮೇಲೆ ಅಧಿಕಾರಕ್ಕೆ ಬಂದಿದ್ದಾರೆ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆ ವೀರೇಂದ್ರ ಪಾಟೀಲರಿಗೆ ಈ ರೀತಿ ಮಾಡಲಾಗಿತ್ತು. ಆಗಿನಿಂದ ಲಿಂಗಾಯತರು ಬಿಜೆಪಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಬೇರೆ ಯಾರನ್ನಾದರೂ ಸಿಎಂ ಮಾಡಲು ಹೊರಟರೆ, ಸಮಾಜ ಸಹಿಸುವುದಿಲ್ಲ. ವೀರಶೈವ ಸಮಾಜದ ನಾಯಕರನ್ನು ಛಿದ್ರ ಮಾಡುವ ಕೆಲಸವನ್ನು ಕೆಲ ನಾಯಕರು ಮಾಡುತ್ತಿದ್ದಾರೆ. ಶಿಸ್ತಿನ ಪಕ್ಷ ಅಂಥವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಮ್ಮ ಸಮಾಜದ ನಾಯಕರ ಮಧ್ಯೆ ಜಗಳ ಹಚ್ಚುತ್ತಿದ್ದಾರೆ. ಇದಕ್ಕೆ ನಮ್ಮ ಸಮಾಜದ ನಾಯಕರು ಬಲಿಪಶು ಆಗಬಾರದು. ಒಂದು ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿದ್ದಲ್ಲಿ ಮುಂದಿನ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಸಮಾಜ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತದೆ ಎಂದು ಎಚ್ಚರಿಕೆ ನೀಡಿದರು.