ಹುಬ್ಬಳ್ಳಿ: ಮದುವೆ ನಿಶ್ಚಯಗೊಂಡು, ಮುಂದಿನ ಜೀವನದ ಬಗ್ಗೆ ನೂರಾರು ಕನಸು ಕಂಡಿದ್ದ ಯುವತಿ ನೇಣಿಗೆ ಶರಣಾಗಿದ್ದಾಳೆ. ಕೈ ಹಿಡಿದು ಬಾಳಿನ ಮುಂದಿನ ಪಯಣಕ್ಕೆ ಜೊತೆಯಾಗಬೇಕಿದ್ದ ವ್ಯಕ್ತಿಯೇ ಆಕೆಯ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.
![Girl committed suicide in hubballi](https://etvbharatimages.akamaized.net/etvbharat/prod-images/kn-hbl-04-suicide-pkg-7208089_13112021161724_1311f_1636800444_984.jpg)
ಹುಬ್ಬಳ್ಳಿಯ ಪ್ರಶಾಂತ ನಗರ ನಿವಾಸಿ ಪವಿತ್ರ ಪಾಟೀಲ ಆತ್ಮಹತ್ಯೆ ಮಾಡಿಕೊಂಡವಳು. ಇವಳಿಗೆ ಮೂಲತಃ ಹಾವೇರಿಯ ಅಭಿನಂದನ್ ಎಂಬಾತನ ಜೊತೆ ಡಿಸೆಂಬರ್ 2ಕ್ಕೆ ವಿವಾಹ ನಿಶ್ಚಯವಾಗಿತ್ತು. ಆದರೆ ವಿವಾಹಕ್ಕೆ 20 ದಿನವಿರುವಾಗಲೇ ಯುವತಿ ಆತ್ಮಹತ್ಯೆಗೆ ಶರಣಾಗಿದ್ದು, ಅಭಿನಂದನ್ನ ಕಿರುಕುಳವೇ ಆಕೆಯ ಸಾವಿಗೆ ಕಾರಣ ಎನ್ನಲಾಗುತ್ತಿದೆ.
ಪ್ರೀ ವೆಡ್ಡಿಂಗ್ ಶೂಟ್:
ಇತ್ತೀಚೆಗೆ ಪವಿತ್ರಳನ್ನು ಅಭಿನಂದನ್ ದಾಂಡೇಲಿಗೆ ಪ್ರೀ ವೆಡ್ಡಿಂಗ್ ಶೂಟ್ಗೆಂದು ಕರೆದೊಯ್ದಿದ್ದ. ಅಲ್ಲಿಂದ ಬಂದ ಬಳಿಕ ಅಭಿನಂದನ್ಗೆ ಅವಳ ಮೇಲೆ ಅನುಮಾನದ ಪಿಶಾಚಿ ಹೆಚ್ಚಾಗಿತ್ತು. ಅವಳ ಶೀಲದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿ ನಿತ್ಯ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಪವಿತ್ರ ಒಂದೆರೆಡು ಬಾರಿ ಮನೆಯಲ್ಲೂ ಈ ವಿಚಾರದ ಬಗ್ಗೆ ಹೇಳಿಕೊಂಡಿದ್ದಳು. ಆದರೆ ಮದುವೆಯಾದ ಬಳಿಕ ಎಲ್ಲಾ ಸರಿಹೋಗಬಹುದು ಅಂತ ಮನೆಯವರು ಸುಮ್ಮನಾಗಿದ್ದರು ಎನ್ನಲಾಗ್ತಿದೆ.
ಸದ್ಯದಲ್ಲೇ ಹಸೆಮಣೆ ಏರಬೇಕಿದ್ದ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ವಿರೋಧ ಮಧ್ಯೆಯೂ ಬಾರ್ ಓಪನ್ : ಮದ್ಯದಂಗಡಿ ಪೀಠೋಪಕರಣ ಧ್ವಂಸ ಮಾಡಿದ ಮಹಿಳೆಯರು