ಹುಬ್ಬಳ್ಳಿ: ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರಗಳಿಗೆ ಜೀವ ತುಂಬುವ ಮೂಲಕ ಹೆಸರು ಮಾಡಿದ್ದ ಸತ್ಯಜಿತ್ ಇಂದು ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಹುಬ್ಬಳ್ಳಿ ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.
ಸತ್ಯಜಿತ್ ಅವರ ಮೂಲ ಹೆಸರು ಸಯ್ಯದ್ ನಿಜಾಮುದ್ದೀನ್. ಆದರೆ ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ಸತ್ಯಜಿತ್ ಎಂದು ಹೆಸರನ್ನು ಬದಲಾಯಿಸಿಕೊಂಡು ಪ್ರಸಿದ್ಧಿ ಪಡೆದರು. ಇವರು ಯಾವುದೇ ಸಿನಿ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ. ಮೂರೂವರೆ ದಶಕಗಳ ಹಿಂದೆ ಹುಬ್ಬಳ್ಳಿಯಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡತ್ತಿದ್ದರು.
ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಹಾಗಾಗಿ ಹವ್ಯಾಸಿ ನಾಟಕ ತಂಡಗಳ ಜೊತೆ ಗುರುತಿಸಿಕೊಂಡಿದ್ದರು. ಊರೂರುಗಳಿಗೆ ತೆರಳಿ ಅನೇಕ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅದು ಅವರನ್ನು ಬಾಲಿವುಡ್ವರೆಗೆ ಕರೆದುಕೊಂಡು ಹೋಯಿತು ಎಂಬುದೇ ಅಚ್ಚರಿ.
ಸತ್ಯಜಿತ್ ಸುಮಾರು 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಕನ್ನಡ ಚಿತ್ರ ರಂಗದಲ್ಲಿ ಖಳನಟನಾಗಿ, ಪೊಲೀಸ್ ಪಾತ್ರಧಾರಿಯಾಗಿ, ಪೋಷಕ ನಟನಾಗಿ ಅಪರೂಪದ ಅಭಿನಯದ ಮೂಲಕ ಮನೆ ಮಾತಾಗಿದ್ದರು. ಹಾಸ್ಯ ಪಾತ್ರಗಳಿಗೆ ತಮ್ಮದೇ ಆದ ರೀತಿಯಲ್ಲಿ ಜೀವ ತುಂಬುತ್ತಿದ್ದರು. ರಾಜ್ ಕುಮಾರ್, ವಿಷ್ಣವರ್ಧನ್ ಸೇರಿದಂತೆ ಅನೇಕ ದೊಡ್ಡ ದೊಡ್ಡ ನಟರ ಜೊತೆ ಅಭಿನಯಿಸಿದ್ದರು. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಸ್ನೇಹಿತರು ಅಗಲಿದ ನಟನ ನೆನೆದು ಕಂಬನಿ ಮಿಡಿದರು.
ಗ್ಯಾಂಗ್ರಿನ್ ಸಮಸ್ಯೆಗೆ ತುತ್ತಾಗಿ ನಾಲ್ಕು ವರ್ಷದ ಹಿಂದೆ ತಮ್ಮ ಎಡಗಾಲನ್ನು ಕಳೆದುಕೊಂಡಿದ್ದ ಸತ್ಯಜಿತ್ ಇದಾದ ಬಳಿಕ ಅಷ್ಟಾಗಿ ಚಿತ್ರದಲ್ಲಿ ಅಭಿನಯಿಸಿರಲಿಲ್ಲ. 72 ವರ್ಷ ಪ್ರಾಯದ ಇವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲಿ ಕಳೆದ ವಾರ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಸತ್ಯಜಿತ್ ನಿಧನಕ್ಕೆ ಅವರ ಸ್ನೇಹಿತರು ಕಣ್ಣೀರಿನ ವಿದಾಯ ಹೇಳಿದ್ದಾರೆ.
ಇದನ್ನೂ ಓದಿ: ಅಂಕುಶ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅಪ್ರತಿಮ ಪೋಷಕ ನಟ ಸತ್ಯಜಿತ್