ಹುಬ್ಬಳ್ಳಿ: ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ದೋಚುತ್ತಿರುವ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಸೈಬರ್ ಖದೀಮರ ಜಾಲದೊಳಗೆ ಸಿಲುಕಿದ ಅಮಾಯಕರು ವಂಚನೆಗೊಳಗಾಗಿ ಲಕ್ಷಾಂತರ ರೂ. ಹಣ ಕಳೆದುಕೊಳ್ಳುತ್ತಿದ್ದಾರೆ.
ಜಿಲ್ಲೆಯಾದ್ಯಂತ ನಕಲಿ ಫೇಸ್‌ಬುಕ್ ಖಾತೆ ಮೂಲಕ ಸಾಲ ಕೇಳುವವರ ಸಂಖ್ಯೆ ಜಾಸ್ತಿಯಾಗಿದ್ದು, ಕಷ್ಟದಲ್ಲಿದ್ದಾರೆ ಎಂದು ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಕೊಟ್ಟು ಲಕ್ಷಾಂತರ ರೂ. ಕಳೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಪೊಲೀಸರಿಗೂ ತಲೆ ನೋವಾಗಿ ಪರಿಣಮಿಸಿದೆ.
ವಂಚನೆಗೊಳಗಾದವರ ನಿಖರ ಸಂಖ್ಯೆ ತಿಳಿಯದಿದ್ದರೂ, ಅಂದಾಜಿನ ಪ್ರಕಾರ ಧಾರವಾಡ ಜಿಲ್ಲೆಯೊಂದರಲ್ಲಿಯೇ 15 ಸಾವಿರಕ್ಕೂ ಹೆಚ್ಚು ಜನರು ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿಯಿದೆ.
ವಂಚನೆ ಹೇಗೆ? ಯಾರು ಇವರ ಟಾರ್ಗೆಟ್:
ಕೆಲವರ ಪ್ರೊಫೈಲ್ ಫೋಟೋ ಬಳಸಿಕೊಂಡು ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸುವ ಖದೀಮರು, ನಕಲಿ ಖಾತೆ ಮೂಲಕ ಗೆಳೆಯರಿಗೆಲ್ಲ( ಪ್ರೊಫೈಲ್ ಫೋಟೋ ಇರುವವರ ಗೆಳೆಯರು) ರಿಕ್ವೆಸ್ಟ್ ಕಳುಹಿಸಿ ಮತ್ತೆ ಮೆಸೆಂಜರ್ ಮೂಲಕ ಹಣದ ಅವಶ್ಯಕತೆ ಇರುವ ಕುರಿತು ಮನವಿ ಮಾಡಿಕೊಳ್ಳುತ್ತಾರೆ.
ಗೆಳೆಯ ಕಷ್ಟದಲ್ಲಿದ್ದಾನೆ ಎಂದು ನೆರವಿಗೆ ಮುಂದಾಗುವ ಸ್ನೇಹಿತರು ವಂಚನೆಗೆ ಬಲಿಯಾಗುತ್ತಿದ್ದಾರೆ. ನಿತ್ಯ ಸಾವಿರಾರು ನಕಲಿ ಖಾತೆಗಳ ಮೂಲಕ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ವಂಚಕರು ಕೆಲವರ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿಕೊಂಡು ವಂಚಿಸುತ್ತಿದ್ದಾರೆ. ಫೇಸ್ಬುಕ್ನಲ್ಲಿನ ಆತ್ಮೀಯ ಸ್ನೇಹಿತರನ್ನು ಟಾರ್ಗೆಟ್ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಾರೆ.
ದೂರು ನೀಡುವವರು ವಿರಳ:
ವಂಚನೆಗೊಳಗಾದ ಬಹುತೇಕರು ದೂರು ನೀಡುವುದಿಲ್ಲ. ಕೆಲವರು ಮಾತ್ರ ದೂರು ಸಲ್ಲಿಕೆ ಮಾಡುತ್ತಾರೆ. ಫೇಸ್‌ಬುಕ್‌ನಲ್ಲಿ ಲಿಂಕ್ ಕ್ಲಿಕ್ ಮಾಡುವಾಗ ಹುಷಾರಾಗಿರಬೇಕು. ಯಾವ ಲಿಂಕ್‌ನಲ್ಲಿ ಏನೇನು ಅಡಗಿದೆಯೋ ಎಂಬುದು ಗೊತ್ತಾಗುವುದಿಲ್ಲ. ಕೆಲವೊಂದು ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ನಮ್ಮ ಖಾತೆ ಹ್ಯಾಕ್ ಆಗುವ ಸಾಧ್ಯತೆಯೂ ಇದೆ.
ಗಣ್ಯರ ಫೋಟೋ ಬಳಸಿ ನಕಲಿ ಖಾತೆ:
ರಾಜಕಾರಣಿಗಳು, ವಿಐಪಿ ಹಾಗೂ ಉದ್ಯಮಿಗಳ ಫೋಟೋ ಬಳಸಿಕೊಂಡು ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಹಣ ವಂಚನೆ ಮಾಡುತ್ತಿದ್ದಾರೆ. ಜಗದೀಶ್ ಶೆಟ್ಟರ್ ಪುತ್ರ ಸಂಕಲ್ಪ ಶೆಟ್ಟರ್ ಅವರಿಗೂ ಇಂತಹ ಮೇಸೆಜ್ಗಳು ಬಂದಿವೆ. ಇಂತಹ ಪ್ರಕರಣಗಳ ಕುರಿತು ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಆದರೂ ವಂಚನೆ ತಡೆಗಟ್ಟಲು ಪೊಲೀಸ್ ಇಲಾಖೆಗೆ ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆರೋಪಗಳು ಸತ್ಯಕ್ಕೆ ದೂರ : ಸರ್ಕಾರದ ಸ್ಪಷ್ಟನೆ