ಧಾರವಾಡ: ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆಗೆ ಹಂತಕರು ಬಳಸಿದ ಬೈಕ್ ಅನ್ನು ಎಸ್‌ಐಟಿ ಪತ್ತೆ ಹಚ್ಚಿದೆ. ಹಂತಕರು ಹತ್ಯೆಗೆ ಕದ್ದ ಬೈಕ್ ಅನ್ನು ಬಳಕೆ ಮಾಡಿದ್ದು, ಹತ್ಯೆಯ ನಂತರ ಬೈಕನ್ನು ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಬಳಿ ಬಿಟ್ಟು ಪರಾರಿಯಾಗಿದ್ದರು ಎಂಬ ಮಾಹಿತಿ ಎಸ್ಐಟಿ ತನಿಖೆ ವೇಳೆ ಬಹಿರಂಗವಾಗಿದೆ.
ಈ ಬೈಕ್ ಧಾರವಾಡ ಮೂಲದ ಕರಿಂ ಸಾಬ್ ಎನ್ನುವರಿಗೆ ಸೇರಿದ್ದು, ಮದುವೆಗೆಂದು ಹೋಗಲು ಕರಿಂ ಸಾಬ್ ತಮ್ಮ ಅಳಿಯ ಬುಡ್ಡ ಸಾಬ್ರಿಗೆ ಈ ಬೈಕ್ ಅನ್ನು ನೀಡಿದ್ದರು ಎನ್ನಲಾಗಿದೆ. ಬುಡ್ಡ ಸಾಬ್ ತಮ್ಮ ಪರಿಚಯದವರೊಬ್ಬರ ತೋಟದ ರಸ್ತೆ ಬಳಿ ಬೈಕ್ ನಿಲ್ಲಿಸಿ ಹೋಗಿದ್ದಾಗ ಬೈಕ್ ಕಳ್ಳತನವಾಗಿದೆ.
ಬೈಕ್ ಕಳ್ಳತನವಾದ ಬಳಿಕ ಬುಡ್ಡ ಸಾಬ್ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದರಾದರೂ ಬೈಕ್ ಪತ್ತೆಯಾಗಿರಲಿಲ್ಲ. ಕಪ್ಪು ನೀಲಿಮಿಶ್ರಿತ ಡಿಸ್ಕವರಿ 125 ಸಿಸಿ ಬೈಕ್ ಕಳ್ಳತನ ಮಾಡಿದ್ದ ಪ್ರಮುಖ ಆರೋಪಿ ಗಣೇಶ ಮಿಸ್ಕಿನ್ ತನ್ನ ಬಳಿ ಇಟ್ಟುಕೊಂಡಿದ್ದು, ಹತ್ಯೆಗಾಗಿ ಈ ಬೈಕ್ ಅನ್ನು ಕಳ್ಳತನ ಮಾಡಿದ್ದ ಎಂಬುದು ಬೆಳಕಿಗೆ ಬಂದಿದೆ. ಸದ್ಯ ತನಿಖೆಯ ವೇಳೆ ಎಸ್.ಐ.ಟಿ ಅಧಿಕಾರಿಗಳು ಬುಡ್ಡ ಸಾಬ್ ನನ್ನು ವಿಚಾರಣೆಗೊಳಪಡಿಸಿ ಮಾಹಿತಿ ಪಡೆದಿದ್ದಾರೆ.