ಹುಬ್ಬಳ್ಳಿ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡದೆ ಇದ್ದರೆ ನಿಮ್ಮನ್ನು ಮನೆಗೆ ಕಳಿಸುತ್ತೇವೆ. ಕೊಟ್ಟ ಮಾತು ತಪ್ಪಿದ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ನಮ್ಮ ಸಮಾಜದ ಶಾಪ ತಟ್ಟಿದೆ. ಕೊಟ್ಟ ಮಾತನ್ನು ಈಗ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಪ್ಪಬಾರದು. ಈ ಮಾತು ತಪ್ಪಿದರೆ, ಅವರಿಗೂ ನಮ್ಮ ಶಾಪ ತಟ್ಟುತ್ತದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಎಚ್ಚರಿಕೆ ರವಾನಿಸಿದರು.
ನಗರದಲ್ಲಿಂದು ಪಂಚಮಸಾಲಿ ಸಮಾಜದ ರ‍್ಯಾಲಿಗೂ ಮುನ್ನ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿ ಪಂಚಮಸಾಲಿ ಸಮಾಜ ದೊಡ್ಡದಿದೆ. ನಾವು ಬಹುಸಂಖ್ಯಾತರು. ಆದರೆ ಇಲ್ಲಿ ಅಲ್ಪಸಂಖ್ಯಾತರು ಆಗಿದ್ದೇವೆ. ಬೊಮ್ಮಾಯಿಯವರೇ ಇದೇ ಕೊನೆ ಹಂತ, ಆಗಸ್ಟ್ 22ರೊಳಗೆ ನಮಗೆ ಮೀಸಲಾತಿ ಕಲ್ಪಿಸಿಕೊಡಿ ಎಂದು ಆಗ್ರಹಿಸಿದರು.
ಮೀಸಲಾತಿ ಕೊಟ್ಟ ಮಾತು ತಪ್ಪಿದರೆ ಬೊಮ್ಮಾಯಿಯವರೇ ನಿಮ್ಮ ಮನೆ ಮುಂದೆ ಹೋರಾಟ ಮಾಡುತ್ತೇವೆ. ಮೀಸಲಾತಿ ಕೊಡದೆ ಇದ್ದರೆ ನಿಮ್ಮನ್ನೂ ಮನೆಗೆ ಕಳಿಸುತ್ತೇವೆ. ಕೊಟ್ಟ ಮಾತು ತಪ್ಪಿದ್ದರಿಂದ ಯಡಿಯೂರಪ್ಪನವರಿಗೆ ನಮ್ಮ ಸಮಾಜದ ಶಾಪ ತಟ್ಟಿದೆ. ಎಂತಹ ಹುಲಿಗಳ ಬಂದರೂ ನಾವು ನೋಡಿಕೊಳ್ಳುತ್ತೇವೆ. ನಮ್ಮ ಕಡೆ ಒಂದು ಬಸವರಾಜ ಪಾಟೀಲ್ ಯತ್ನಾಳ ಎನ್ನುವ ಹೆಬ್ಬುಲಿ ಇದೆ ಎಂದು ಸಂದೇಶ ರವಾನಿಸಿದರು.
ಇದನ್ನೂ ಓದಿ: ಪಂಚಮಸಾಲಿ ಸಮುದಾಯ ನಿರ್ಲಕ್ಷಿಸಿದರೆ ತೊಂದರೆ ಅನುಭವಿಸಬೇಕಿದೆ:ಬಸವಜಯ ಮೃತ್ಯುಂಜಯ ಶ್ರೀ ವಾರ್ನಿಂಗ್