ಹುಬ್ಬಳ್ಳಿ: ಗೆಲ್ಲುವ ಸಮಯದಲ್ಲಿ ಕುಮಾರಸ್ವಾಮಿಗೆ ಅಲ್ಪಸಂಖ್ಯಾತರು ಯಾಕೆ ನೆನಪು ಬರಲ್ಲ. ಅಲ್ಪಸಂಖ್ಯಾತರನ್ನು ಬಲಿ ಕೊಡುವುದೇ ಕುಮಾರಸ್ವಾಮಿಯವರ ಕೆಲಸ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದ್ದಾರೆ.
‘ಹೆಚ್ಡಿಕೆಯಿಂದ ಯಡಿಯೂರಪ್ಪಗೂ ಮೋಸ’
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಕೇವಲ ಅಲ್ಪಸಂಖ್ಯಾತರಿಗೆ ಅಷ್ಟೇ ಅಲ್ಲ, ಯಡಿಯೂರಪ್ಪನರವರಿಗೂ ಮೋಸ ಮಾಡಿದ್ದಾರೆ. ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟು ಕೊಡಿ ಎಂದು ನಾನು ಕುಮಾರಸ್ವಾಮಿಗೆ ಹೇಳಿದ್ದೆ. ಹೆಚ್.ಡಿ.ರೇವಣ್ಣ ಎಲ್ಲಿ ಉಪ ಮುಖ್ಯಮಂತ್ರಿ ಆಗ್ತಾರೋ ಎಂದು ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟು ಕೊಡಲಿಲ್ಲ. ಇದರ ಬಗ್ಗೆ ನನ್ನ ಬಳಿ ದಾಖಲೆ ಇದೆ. ಕುಮಾರಸ್ವಾಮಿ ಸ್ವಂತ ಸಹೋದರನ ಏಳಿಗೆಯನ್ನ ಸಹಿಸಿಕೊಳ್ಳುವುದಿಲ್ಲ. ಇನ್ನು ನಮ್ಮ ಏಳಿಗೆಯನ್ನ ಸಹಿಸಿಕೊಳ್ಳುವುದು ದೂರದ ಮಾತು. ಸೋಲುವ ಸಮಯದಲ್ಲಿ ಕುರಿ ಬಲಿ ಕೊಟ್ಟ ಹಾಗೆ, ಅಲ್ಪಸಂಖ್ಯಾತರನ್ನ ಬಲಿ ಕೊಡುವವರು ಅವರು ಎಂದು ವಾಗ್ದಾಳಿ ನಡೆಸಿದ್ರು.
‘ರೈಟ್ ಪರ್ಸನ್ ಉದಾಸಿ, ರಾಂಗ್ ಪಾರ್ಟಿಯಲ್ಲಿದ್ರು’
ಸಿಂದಗಿಯಲ್ಲಿ ನಮ್ಮ ಅಭ್ಯರ್ಥಿ ಗೆಲ್ತಾರೆ. ಹಾನಗಲ್‌ನಲ್ಲಿ ಶ್ರೀನಿವಾಸ ಮಾನೆ ಒಳ್ಳೆಯ ಕೆಲಸ ಮಾಡಿದ್ದಾರೆ. ಕ್ಷೇತ್ರದಲ್ಲಿ ಅವರು ಗೆಲ್ಲೋದು ನಿಶ್ಚಿತ. ಸಿ.ಎಂ.ಉದಾಸಿ ರೈಟ್ ಪರ್ಸನ್, ಆದ್ರೆ ರಾಂಗ್ ಪಾರ್ಟಿಯಲ್ಲಿದ್ದರು. ಬಿಜೆಪಿಯಿಂದ ಅವರ ಕುಟುಂಬಕ್ಕೆ ಟಿಕೆಟ್ ಕೊಡಬೇಕಾಗಿತ್ತು. ಉದಾಸಿ ಕುಟುಂಬಕ್ಕೆ ಟಿಕೆಟ್ ನೀಡದ ಕಾರಣಕ್ಕೆ ಅವರು ಸೋತಿದ್ದಾರೆ. ಎರಡೂ ಉಪ ಚುನಾವಣೆಯಲ್ಲಿ ಜೆಡಿಎಸ್ ಲೆಕ್ಕಕ್ಕೆ ಇಲ್ಲ. ಬಸವ ಕಲ್ಯಾಣದಲ್ಲಿ ಜೆಡಿಎಸ್ ನೋಡಿ ಮತ ಹಾಕಿಲ್ಲ, ಅಲ್ಲಿನ ವ್ಯಕ್ತಿಯನ್ನು ನೋಡಿ ಮತ ಹಾಕಿದ್ದಾರೆ. ಇದರಿಂದ ಅಲ್ಲಿ ಬಿಜೆಪಿ ಗೆಲ್ಲಲು ಸಹಾಯವಾಗಿದೆ.
‘ಜೆಡಿಎಸ್ನಿಂದ ಸೂಟ್‌ಕೇಸ್ ರಾಜಕಾರಣ’
ಉಪಚುನಾವಣೆಯಲ್ಲಿ ಸೂಟ್‌ಕೇಸ್ ರಾಜಕಾರಣ ಮಾಡಿ, ಅಲ್ಪಸಂಖ್ಯಾತರನ್ನು ಬಲಿ ತೆಗೆದುಕೊಂಡಿದ್ದಾರೆ. ಹಾನಗಲ್‌ನಲ್ಲಿ ಸೂಟ್‌ಕೇಸ್ ಬಾರದ ಕಾರಣ ಒಂದೇ ದಿನ ಪ್ರಚಾರ ಮಾಡಿದ್ದಾರೆ. ಸೂಟ್‌ಕೇಸ್ ಪದ್ಧತಿಯ ಬಗ್ಗೆ ನಾನು ಹೇಳ್ತಿಲ್ಲ, ದೇವೇಗೌಡ್ರ ಮೊಮ್ಮಗ ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. 2004 ರಿಂದ ಇಲ್ಲಿಯವರೆಗೆ ನಡೆದ ಎಲ್ಲಾ ಉಪಚುನಾವಣೆಯಲ್ಲಿ ಸೂಟ್‌ಕೇಸ್ ರಾಜಕಾರಣ ಮಾಡಿದ್ದಾರೆ. ಕುಮಾರಸ್ವಾಮಿಯವರು ಬಹಳ ಮುಸ್ಲಿಂ ಜನರನ್ನು ಬಲಿ ತೆಗೆದುಕೊಂಡಿದ್ದಾರೆ. ತನ್ವೀರ್ ಸೇಠ್‌ರನ್ನು ಸೋಲಿಸಿದ್ದೇ ಕುಮಾರಸ್ವಾಮಿ. ಕುಮಾರಸ್ವಾಮಿ ಟಾರ್ಗೆಟ್ ಅಲ್ಪಸಂಖ್ಯಾತರು, ಅಲ್ಪಸಂಖ್ಯಾತರನ್ನು ಮುಗಿಸಿದ್ದು ಸಿದ್ದರಾಮಯ್ಯ ಅಲ್ಲ, ಕುಮಾರಸ್ವಾಮಿ ಎಂದರು.
‘ದೇವೇಗೌಡರಂತಲ್ಲ ಕುಮಾರಸ್ವಾಮಿ’
ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗೆ ಒಳ್ಳೆಯ ಯೋಜನೆಗಳನ್ನ ನೀಡಿದ್ದಾರೆ. ಆದರೆ, ಕುಮಾರಸ್ವಾಮಿ ಅಲ್ಪಸಂಖ್ಯಾತರಿಗೆ ಏನೂ ನೀಡಲಿಲ್ಲ, ಅದಕ್ಕೆ ನಾನು ಜೆಡಿಎಸ್ ಬಿಟ್ಟು ಕಾಂಗ್ರೆಸ್ಗೆ ಬಂದಿದ್ದು. ನನ್ನ ರಾಜಕೀಯ ಗುರುಗಳು ದೇವೇಗೌಡರು ಮತ್ತು ಸಿದ್ದರಾಮಯ್ಯ. ದೇವೇಗೌಡ್ರು 100% ಸೆಕ್ಯೂಲರ್, ಅವರ ಒಂದು ಗುಣವೂ ಕುಮಾರಸ್ವಾಮಿಗೆ ಇಲ್ಲ ಎಂದು ಹೇಳಿದರು.
‘ಕುಮಾರಸ್ವಾಮಿಯವರನ್ನು ನಾನೇ ಸಾಕಿದ್ದೇನೆ’
ಜಯನಗರ ಬೈ ಎಲೆಕ್ಷನ್‌ನಲ್ಲಿ ಜನರಿಗೆ ಕುಮಾರಸ್ವಾಮಿ ಯಾರು ಅಂತಾನೇ ಗೊತ್ತಿರಲಿಲ್ಲ. ನಾನೇ ಮಾಜಿ ಪ್ರಧಾನ ಮಂತ್ರಿ ಮಗ ಅಂತ ಪರಿಚಯ ಮಾಡಿಕೊಟ್ಟಿದ್ದು. ಕುಮಾರಸ್ವಾಮಿಯವರನ್ನ ನಾನೇ ಸಾಕಿದ್ದೇನೆ. ಅವರಿಗೆ ನಾನು ಏನು ಕೊಟ್ಟಿದ್ದೇನೆ ಎಂಬುದನ್ನು ಅವರನ್ನೇ ಕೇಳಿ ಹೇಳುತ್ತಾರೆ ಎಂದರು.
‘ಬಿಜೆಪಿಯಿಂದ ವೋಟಿಗಾಗಿ ಜಾತಿ ಸಭೆ’
ಉಪಚುನಾವಣಾ ಪ್ರಚಾರಕ್ಕೆ ಈಶ್ವರಪ್ಪನವರನ್ನು ಯಾರು ಪ್ರಚಾರಕ್ಕೆ ಕರೆದಿಲ್ಲ. ಅವರೇ ಬಂದಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಬಂದ್ರೆ ಜನಸಾಗರವೇ ನೆರೆದಿರುತ್ತೆ. ಬಿಜೆಪಿ ಅಭಿವೃದ್ಧಿ ಬಗ್ಗೆ ಮಾತೇ ಇಲ್ಲ. ವೋಟಿಗಾಗಿ ಅವರು ಜಾತಿ ಸಭೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
‘ಮುಂದಿನ ಪ್ರಧಾನಿ ರಾಹುಲ್ ಗಾಂಧಿ’
ಅಚ್ಛೇದಿನ್ ಎಲ್ಲಿದೆ. ತೈಲ ದರ 100 ರೂ.ದಾಟಿದೆ. ಬಿಜೆಪಿ ಆಡಳಿತದಿಂದ ಜನತೆ ರೋಸಿ ಹೋಗಿದ್ದು, ಮುಂದಿನ ಬಾರಿ ಕಾಂಗ್ರೆಸ್ಗೆ ಮತ ಹಾಕ್ತಾರೆ. ಆಗ ಕಾಂಗ್ರೆಸ್ ಗೆದ್ದು ರಾಹುಲ್ ಗಾಂಧಿ ಪ್ರಧಾನಿಯಾಗ್ತಾರೆ ಎಂದರು.
ಇದನ್ನೂ ಓದಿ: ಜನರ ಪ್ರೀತಿಯಿಂದ ಮತ್ತೆ ರಾಜಕೀಯಕ್ಕೆ ಮರಳಲು ಸಾಧ್ಯವಾಯಿತು: ಲಾಲು ಪ್ರಸಾದ್