ಹುಬ್ಬಳ್ಳಿ : ರಾಜ್ಯದಲ್ಲಿ ಚುನಾವಣಾ ದಿನಾಂಕ ಘೋಷಣೆಯಾದಾಗಿನಿಂದ ಆಯಾ ಪಕ್ಷಗಳ ಮುಖಂಡರ ಪಕ್ಷಾಂತರ ಪರ್ವ ಜೋರಾಗಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಜಗದೀಶ್ ಶೆಟ್ಟರ್ ಅವರು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಇದರ ಬೆನ್ನಲ್ಲೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಾಜಿ ಮೇಯರ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಪ್ರಕಾಶ ಕ್ಯಾರಕಟ್ಟಿ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ನಗರದ ಕುಸುಗಲ್ ರಸ್ತೆಯಲ್ಲಿನ ಶ್ರೀನಿವಾಸ್ ಗಾರ್ಡನ್ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.
ಇದನ್ನೂ ಓದಿ : Karnataka Election: ಅಮಿತ್ ಶಾ ವಿರುದ್ಧ ಕಾಂಗ್ರೆಸ್ ನಾಯಕರಿಂದ ಪೊಲೀಸರಿಗೆ ದೂರು
ಇನ್ನು ಈ ವೇಳೆ ಸದಾಶಿವ ಕಾರಡಗಿ, ಹನುಮಂತಸಾ ನಿರಂಜನ ಹಾಗೂ ಬೆಂಬಲಿಗರು ಬಿಜೆಪಿ ಬಾವುಟ ಹಿಡಿಯುವ ಮೂಲಕ ಪಕ್ಷ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಗೋವಿಂದ್ ಕಾರಜೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಳಿಕ ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಸಹ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ರಾಜ್ಯಕ್ಕೆ ಬರಲಿದ್ದಾರೆ. ರಾಜ್ಯದಲ್ಲಿ ಮೋದಿಯವರ 12 ರ‍್ಯಾಲಿ ನಡೆಯಲಿದ್ದು, ಆ ಬಳಿಕ ದೊಡ್ಡ ಪ್ರಮಾಣದಲ್ಲಿ ರಾಜ್ಯದ ವಾತಾವರಣ ಬದಲಾಗುತ್ತದೆ. ಹೀಗಾಗಿ ಕಾಂಗ್ರೆಸ್ ನವರು ಮೈ ಮೈ ಪರಚಿಕೊಳ್ಳುತ್ತಿದ್ದಾರೆ, ಅವರು ಪರಚಿಕೊಳ್ಳಲಿ ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ : ನಾನು ಕೂಡ ವೋಟ್ ಮಾಡುವೆ, ನೀವು ಕೂಡ ತಪ್ಪದೇ ವೋಟ್ ಮಾಡಿ: ಸೆಲೆಬ್ರಿಟಿಗಳ ಮನವಿ
ಕಾಂಗ್ರೆಸ್‌ನಿಂದ ಲಿಂಗಾಯತ ಮತ್ತು ಸಂತೋಷ್ ಜೀ ಅಸ್ತ್ರ ಪ್ರಯೋಗ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರ ಹೆಸರು ಕಾಣದೇ ಇದ್ದಾಗ ಒಂದು ಹೆಸರು ಪ್ರಸ್ತಾಪ ಮಾಡುತ್ತಾರೆ. ಆ ಹೆಸರು ತೆಗೆದುಕೊಂಡು ವಿವಾದ ಮಾಡುತ್ತಿದ್ದಾರೆ. ಸಂತೋಷ್ ಜೀ ಮತ್ತು ಬೇರೆ ಯಾರದೇ ಹೆಸರು ತರುವ ಅಗತ್ಯ ಇಲ್ಲ ಪಕ್ಷದ ವಿದ್ಯಾಮಾನಗಳು ನಮ್ಮ ಪಕ್ಷದಲ್ಲಿ ನಡೆಯುತ್ತವೆ. ಯಾವುದೇ ಒಂದು ವ್ಯಕ್ತಿಯ ಮೇಲೆ ಇರುವುದಿಲ್ಲ ಕಾಂಗ್ರೆಸ್ ಲಿಂಗಾಯತರನ್ನು ಹೇಗೆ ನಡೆಸಿಕೊಂಡಿದೆ ಎನ್ನುವುದರ ಮೇಲೆ ವಿರೇಂದ್ರ ಪಾಟೀಲರಿಗೆ ಹೇಗೆ ಅವಮಾನ ಮಾಡಿದರು. ಹಾಗು ನಿಜಲಿಂಗಪ್ಪನವರಿಗೆ ಇಂದಿರಾ ಗಾಂಧಿ ಹೇಗೆ ಅಪಮಾನ ಮಾಡಿದರು ಎನ್ನುವುದು ಇತಿಹಾಸದಲ್ಲಿ ಎಲ್ಲವೂ ದಾಖಲಾಗಿವೆ. ಹೀಗಾಗಿ ಕಾಂಗ್ರೆಸ್ ಏನೇ ಮಾಡಿದರೂ ಜನ ಒಪ್ಪುವುದಿಲ್ಲ. ಮತ್ತೆ ಯಾರಾದಾದರೂ ಹೆಸರು ಹೇಳಿಕೊಳ್ಳುತ್ತಾ ಹೋಗಿ, ಜನ ನಿಮಗೆ ಸೂಕ್ತ ಪಾಠ ಕಲಿಸುತ್ತಾರೆ ಎಂದು ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದರು.
ರಾಜ್ಯದಲ್ಲಿ ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ : ರಾಹುಲ್ ಗಾಂಧಿ 224 ಕ್ಷೇತ್ರಕ್ಕೂ ಹೋಗಲಿ, ಅವರು ಹೋದಲೆಲ್ಲ ಕಾಂಗ್ರೆಸ್ ಸೋತಿದೆ: ನಳಿನ್ ಕುಮಾರ್ ಕಟೀಲ್