ಹುಬ್ಬಳ್ಳಿ: ಅವಳಿ ನಗರದ ಮಹತ್ವದ ಯೋಜನೆಯೆಂದೇ ಖ್ಯಾತಿ ಪಡೆದ ಸ್ಮಾರ್ಟ್ ಸಿಟಿ ಯೋಜನೆಯಿಂದ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಕೊಂಚ ಮಟ್ಟಿಗೆ ನಗರ ಸ್ಮಾರ್ಟ್ ಆಗುತ್ತಿದೆ. ಆದರೆ ಹು-ಧಾ ಮಹಾನಗರವನ್ನು ಸ್ಮಾರ್ಟ್ ಮಾಡುವ ಯೋಜನೆಯ ಮಹತ್ವದ ಕಾಮಗಾರಿ ಆರಂಭವಾಗದೇ. ಸಾರಿಗೆ ಸಂಸ್ಥೆಗೆ ಆರ್ಥಿಕ ಹೊಡೆತ ಬಿದ್ದಿದೆ.
ವಾಣಿಜ್ಯನಗರಿ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣವನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಾಣ ಮಾಡಲು 37 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಆದರೆ ಈವರೆಗೂ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ. ಇಂದು ಅಥವಾ ನಾಳೆ ಕಾಮಗಾರಿ ಪ್ರಾರಂಭಿಸುತ್ತಾರೆಂದುಕೊಂಡಿದ್ದವರಿಗೆ ದಿನದಿಂದ ದಿನಕ್ಕೆ ನಿರಾಶೆಯ ಮನೋಭಾವ ವ್ಯಕ್ತವಾಗುತ್ತಿದೆ.
ಅಲ್ಲದೇ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಹಳೆಯ ಬಸ್ ನಿಲ್ದಾಣದ ಅಂಗಡಿ-ಮುಂಗಟ್ಟು ತೆರವುಗೊಳಿಸಲಾಗಿದೆ. ಆದರೂ ಕೂಡ ಕಾಮಗಾರಿ ಪ್ರಾರಂಭಗೊಂಡಿಲ್ಲ. ಇದರಿಂದ ಸಾರಿಗೆ ಸಂಸ್ಥೆಗೆ ತಿಂಗಳಿಗೆ ಸುಮಾರು 25 ಲಕ್ಷ ರೂ. ಆರ್ಥಿಕ ಹಾನಿಯಾಗುತ್ತಿದೆ.
ಹಳೆ ಬಸ್ ನಿಲ್ದಾಣದಲ್ಲಿ ಸುಮಾರು 37 ಅಂಗಡಿಗಳು, ಕೊಠಡಿ ಬಾಡಿಗೆ ಪಡೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದವು. ಈ ಅಂಗಡಿ ಮುಗ್ಗಟ್ಟುಗಳಿಂದ ತಿಂಗಳಿಗೆ 25 ಲಕ್ಷ ರೂ.ಆದಾಯ ಸಾರಿಗೆ ಸಂಸ್ಥೆಗೆ ಬರುತ್ತಿತ್ತು. ಕಾಮಗಾರಿಗೋಸ್ಕರ ಅಂಗಡಿ ತೆರವುಗೊಳಿಸಿದರೂ ಕೂಡ ಕೆಲಸ ಮಾತ್ರ ಪ್ರಾರಂಭಗೊಂಡಿಲ್ಲ. ಈಗಾಗಲೇ ಲಾಕ್ಡೌನ್ ಸಂದರ್ಭದಲ್ಲಿ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಸಾರಿಗೆ ಸಂಸ್ಥೆ ಆನ್ಲಾಕ್ನಿಂದ ಚೇತರಿಸಿಕೊಳ್ಳುತ್ತಿದೆ. ಆದರೆ ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬದಿಂದ ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ.
ಈ ಕುರಿತು ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಕೇಳಿದರೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಇನ್ನೇನು ಕೆಲವು ದಿನಗಳಲ್ಲಿ ಆರಂಭವಾಗುತ್ತದೆ ಎಂದು ತಿಳಿಸುತ್ತಾರೆ. ಆದರೆ ದಿನದಿಂದ ದಿನಕ್ಕೆ ವಿಳಂಬವಾದರೆ, ಸಾರಿಗೆ ಸಂಸ್ಥೆ ವಾರ್ಷಿಕ ಮೂರು ಕೋಟಿ ರೂ. ನಷ್ಟ ಅನುಭವಿಸಬೇಕಾಗುತ್ತದೆ.
ಓದಿ: ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ: ರಾಜಧಾನಿಯಲ್ಲೂ ಏರುತ್ತಿದೆ ತಾಪಮಾನ
ಈಗಾಗಲೇ ಹುಬ್ಬಳ್ಳಿಯ ಬಹುತೇಕ ಮಾರ್ಗದ ಬಸ್ಗಳನ್ನು ಹೊಸ ಬಸ್ ನಿಲ್ದಾಣ, ಹೊಸೂರು ರಿಜನಲ್ ಟರ್ಮಿನಲ್ಗೆ ಸ್ಥಳಾಂತರ ಮಾಡಲಾಗಿದೆ. ಕೂಡಲೇ ಸ್ಮಾರ್ಟ್ ಸಿಟಿ ಅಡಿಯಲ್ಲಿ ಕೇಂದ್ರೀಯ ಬಸ್ ನಿಲ್ದಾಣದ ಕಾಮಗಾರಿ ಪ್ರಾರಂಭಿಸಿ, ಸಂಭವಿಸುವ ನಷ್ಟವನ್ನು ಸರಿಪಡಿಸಬೇಕಿದೆ.