ಹುಬ್ಬಳ್ಳಿ: ಎಲ್ಲ ಕಡೆ ಮಳೆ ಬಂದ್ರೆ ರೈತ ವರ್ಗ ಖುಷಿಪಡುವುದನ್ನು ನೋಡುತ್ತೇವೆ. ಆದ್ರೆ ನವಲಗುಂದ, ಕುಂದಗೋಳ ಭಾಗದಲ್ಲಿ ಹೆಚ್ಚು ಮಳೆ ಬಂದು ಬೆಣ್ಣೆ ಹಳ್ಳ, ತುಪ್ಪರಿ ಹಳ್ಳ ಉಕ್ಕಿ ಹರಿದರೆ ಈ ಭಾಗದ ರೈತರು ಕಣ್ಣೀರು ಹಾಕುತ್ತಾರೆ. ಮಳೆ ಬಂದು ಹಳ್ಳ ತುಂಬಿದರೇ ಇಲ್ಲಿನ ರೈತರಿಗೆ ಸಂಕಷ್ಟ ಎದುರಾಗುತ್ತದೆ. ಆ ಹಳ್ಳಗಳು ರೈತ ಸಮುದಾಯಕ್ಕೆ ಎಷ್ಟು ಅನುಕೂಲ ಆಗಿದೆಯೋ ಗೊತ್ತಿಲ್ಲ. ಆದರೆ ಮಳೆಗಾಲದಲ್ಲಿ ದೊಡ್ಡ ಅನಾನುಕೂಲ ಸೃಷ್ಟಿಸುತ್ತವೆ.
ಪ್ರತಿ ಬಾರಿಯೂ ಮಳೆ ಬಿದ್ದಾಗ ಜಿಲ್ಲೆಯ ಬೆಣ್ಣೆ ಹಾಗೂ ತುಪ್ಪರಿ ಹಳ್ಳಗಳು ರೈತಾಪಿ ವರ್ಗಕ್ಕೆ ಶಾಪವಾಗಿ ಪರಿಣಮಿಸಿವೆ. ಶಾಶ್ವತ ಪರಿಹಾರ ಒದಗಿಸಬೇಕು ಎಂದು ಹಲವು ವರ್ಷದಿಂದ ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ಜನರು ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ.
ಕಳೆದ ವರ್ಷ ಹಿಂಗಾರಿ ಸಮಯದಲ್ಲಿ ಭಾರಿ ಮಳೆ ಬಿದ್ದ ಪರಿಣಾಮ ಪ್ರವಾಹ ಉಂಟಾಗಿ ಅನೇಕ ಗ್ರಾಮಗಳು ಮುಳುಗಡೆ ಆಗಿದ್ದವು. ಸಾಕಷ್ಟು ಬೆಳೆ ಹಾನಿಯಾಗಿ ರೈತರು ಕಣ್ಣೀರಲ್ಲಿ ಕೈತೊಳೆದಿದ್ದರು. ಹೊಲದಲ್ಲಿ ಖರ್ಚು ಮಾಡಿ ಬಿತ್ತಿದ ಬೆಳೆ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿತ್ತು. ಈ ಎರಡು ಹಳ್ಳದ ಪ್ರವಾಹಕ್ಕೆ ಸಿಲುಕಿ ಅನೇಕರು ಪ್ರಾಣ ಕಳೆದುಕೊಂಡರು.
ಬೆಣ್ಣೆ ಹಳ್ಳ, ತುಪ್ಪರಿ ಹಳ್ಳ ಪ್ರವಾಹ ಸಮಸ್ಯೆಯಿಂದ ಮುಕ್ತಿ ಯಾವಾಗ? ಬೆಣ್ಣೆ ಹಳ್ಳ, ತುಪ್ಪರಿ ಹಳ್ಳ ಪ್ರವಾಹ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯಾರಿಗೂ ಆಸಕ್ತಿ ಇಲ್ಲ. ಏಕೆಂದರೆ ಇದು ಕೆಲ ಅಧಿಕಾರಿಗಳ, ಜನಪ್ರತಿನಿಧಿಗಳ ಪಾಲಿಗೆ ಈ ಹಳ್ಳಗಳು ಚಿನ್ನದ ಮೊಟ್ಟೆಗಳಾಗಿವೆ. ಸಾಕಷ್ಟು ಅನುದಾನ ಬಂದರೂ ಸಹ ಅವರ ದುರಪಯೋಗಕ್ಕೆ ಕಾರಣವಾಗಿವೆ ಎಂದು ರೈತರ ಆರೋಪಿಸುತ್ತಿದ್ದಾರೆ.
ತುಪ್ಪರಿ ಹಳ್ಳ ಅಗಲೀಕರಣಕ್ಕೆ ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ 350 ಕೋಟಿ ಅನುದಾನ ನೀಡಲಾಗಿತ್ತು. ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕೆಂಬ ಉದ್ದೇಶದಿಂದ ಪ್ರಯತ್ನವನ್ನು ಸಹ ಮಾಡಿದ್ದರು. ಶಂಕುಸ್ಥಾಪನೆಯಾಗಿ 6 ತಿಂಗಳು ಕಳೆಯುತ್ತ ಬಂದರೂ ಕಾರ್ಯರೂಪಕ್ಕೆ ಬಂದಿಲ್ಲ.
ಬೆಣ್ಣೆಹಳ್ಳ ಪ್ರವಾಹ ತಡೆಯಲು ಅಂದಾಜು 500 ಕೋಟಿ ರೂ. ವೆಚ್ಚದಲ್ಲಿ ಸೇತುವೆಗಳ ಎತ್ತರ ಹೆಚ್ಚಳ, ಕೆಲವೊಂದು ಕಡೆ ಅಗಲೀಕರಣ, ಹೂಳು ತೆಗೆಯುವುದು ಇನ್ನಿತರ ಕಾರ್ಯ ಮಾಡಬೇಕು ಎಂಬುವುದು ಘೋಷಣೆ ಮಾತ್ರ ಸೀಮಿತವಾಗಿದೆ. ಈಗ ಸರ್ಕಾರ ಬದಲಾಗಿದ್ದು, ಈ ಭಾಗದ ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುತ್ತದೆಯೋ ಕಾದುನೋಡಬೇಕಿದೆ.
ಜನ ಏನು ಹೇಳ್ತಾರೆ? ಬೆಣ್ಣೆ ಹಳ್ಳವೂ ವರವಾಗಿ ಪರಿಣಿಮಿಸಬೇಕಿತ್ತು. ಆದರೆ ಇದು ಮಳೆಗಾಲದಲ್ಲಿ ಶಾಪವಾಗಿ ರೈತರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದಕ್ಕೆ ಯಾವುದೇ ರೀತಿ ಆಳ ಅಗಲ ಸರಿಯಾದ ಪ್ರಮಾಣದಲ್ಲಿ ಇಲ್ಲ. ಮಳೆ ಬಂದಾಗ ತಾಲೂಕಿನ ಎಂಟತ್ತು ಹಳ್ಳಿಗಳನ್ನು ಜಲಾವೃತ ಮಾಡಿ ಮುಂದೆ ಸಾಗುತ್ತದೆ. ಇದು ಹಳ್ಳ ಹೋಗಿ ಸರೋವರ ಆಗುವುದರಿಂದ, ಈ ನೀರು ಹಲವಾರು ಊರೊಳಗೆ ಬರುತ್ತದೆ. ಇದರಿಂದ ಮಣ್ಣಿನ ಚಾವಣಿ ಇರುವ ಮನೆಗಳಿಗೆ ಸಾಕಷ್ಟು ಹಾನಿ ಮಾಡುತ್ತೆ. ಅಲ್ಲದೆ, ಬೆಳೆಗಳು ಕೊಚ್ಚಿಕೊಂಡು ಹೋಗುತ್ತವೆ.
ಬೆಣ್ಣೆ ಹಳ್ಳ ಹರಿದು ಬಂಡಿವಾಡ, ಶಿರಗುಪ್ಪಿ, ಮಂಟೂರು ನಾಗರಳ್ಳಿ ಸೇರಿ ಮುಂಬರುವ ಹಲವಾರು ಊರುಗಳಿಗೆ ಸಾಕಷ್ಟು ಹಾನಿ ಮಾಡುತ್ತದೆ. ಸಂಸದ, ಶಾಸಕರು ಹಾಗೂ ಇದಕ್ಕೆ ಸಂಬಂಧಿಸಿದ ಮೇಲಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸಿ, ಹಳ್ಳದ ಪ್ರವಾಹ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಶಿರಗುಪ್ಪಿ ಗ್ರಾಪಂ ಸದಸ್ಯ ತಾಜುದ್ದೀನ್ ಆಗ್ರಹಿಸಿದ್ದಾರೆ.
ಇದನ್ನೂಓದಿ: ಹುಬ್ಬಳ್ಳಿಯಲ್ಲೂ ಜನರನ್ನು ಕಂಗೆಡಿಸಿದ 'ಮದ್ರಾಸ್ ಐ': ಮುನ್ನಚ್ಚರಿಕೆ ಅವಶ್ಯಕ