ಹುಬ್ಬಳ್ಳಿ : ಕಳೆದ ವರ್ಷ ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದ ಧಾರವಾಡ ಜಿಲ್ಲೆಯ ರೈತರು, ಈ ವರ್ಷವೂ ಅತಿವೃಷ್ಟಿಯಿಂದ ಫಸಲು ಕಳೆದುಕೊಂಡು ಕಂಗಾಲಾಗಿದ್ದಾರೆ. ಸಂಸಾರ ನಡೆಸಲು ಹಲವಾರು ರೈತರು ಮನೆಯಲ್ಲಿರುವ ಜಾನುವಾರುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಜಾನುವಾರುಗಳ ಮಾರಾಟಗಾರರ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚಳವಾಗಿದೆ.
ರೈತನ ಮನೆಯ ದೇವರು, ಭೂತಾಯಿಯ ಕಾಯಕಕ್ಕೆ ಅನ್ನದಾತನಿಗೆ ಹೆಗಲಿಗೆ ಹೆಗಲು ಕೊಟ್ಟ ಬಸವನನ್ನು ಸಲಹಲಾಗದೆ, ಹೊಟ್ಟೆಗೆ ಹೊಟ್ಟು ಮೇವು ಖರೀದಿಸಲಾಗದೆ ಜಾನುವಾರುಗಳನ್ನು ಒಲ್ಲದ ಮನಸ್ಸಿನಿಂದ ರೈತ ಮಾರಾಟಕ್ಕೆ ಮುಂದಾಗಿದ್ದಾನೆ. ಹುಬ್ಬಳ್ಳಿ ತಾಲೂಕಿನ ನೂಲ್ವಿಯ ಬಸವೇಶ್ವರ ಮಾರುಕಟ್ಟೆಯಲ್ಲಿ ಗುರುವಾರ ನಡೆದ ಜಾನುವಾರ ಸಂತೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ರೈತರು ತಮ್ಮ ಹಸು, ಎಮ್ಮೆ, ಎತ್ತುಗಳನ್ನು ಮಾರಾಟಕ್ಕೆ ತಂದಿದ್ದರು.
ಮೊದಲೇ ಅತಿವೃಷ್ಟಿ ಸಂಕಷ್ಟಕ್ಕೆ ಬೆಳೆ ಕಳೆದುಕೊಂಡ ರೈತನಿಗೆ ಜಾನುವಾರುಗಳ ಮೇವು ಸಹ ಹೊರೆಯಾಗಿದೆ. ಇತ್ತ ಫಸಲು ಇಲ್ಲದೆ ಲಾಭವೂ ಇಲ್ಲದೆ ಸಾಲದಲ್ಲೇ ಜೀವನ ನಡೆಸುತ್ತಿರುವ ರೈತ ಜಾನುವಾರುಗಳನ್ನು ಮೇವಿಲ್ಲದೆ ಮನೆಯಲ್ಲಿ ಉಪವಾಸ ಕಟ್ಟಲಾಗದೆ ಮಾರಾಟಕ್ಕೆ ಮುಂದಾಗಿರುವುದು ಮನ ಕಲುಕುವಂತಿದೆ.
ಮಾರುಕಟ್ಟೆಯಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ಎತ್ತು, ಎಮ್ಮೆ, ಆಕಳು, ಹೋರಿ, ಕರುಗಳನ್ನು ಕೊಳ್ಳುವವರಿಗಿಂತ ಮಾರುವ ರೈತರೇ ಹೆಚ್ಚಾಗಿದ್ದರು. ಲಕ್ಷ ಲಕ್ಷ ಬೆಲೆ ಬಾಳುವ ಜಾನುವಾರು ಕೇವಲ ನಲವತ್ತು, ಐವತ್ತು ಸಾವಿರಕ್ಕೆ ವ್ಯಾಪಾರಿಗಳು ಕೇಳುತ್ತಿದ್ದು ರೈತನ ಕಣ್ಣಲ್ಲಿ ಮನೆಯಲ್ಲೇ ಹುಟ್ಟಿ ಬೆಳೆದ, ಬೇಸಾಯಕ್ಕೆ ನೆರವಾದ, ಐದಾರು ವರ್ಷ ಹಾಲು ಕೊಟ್ಟು ಹಸುಗಳನ್ನು ಅತಿವೃಷ್ಟಿ ಪರಿಣಾಮ ಮಾರಾಟ ಮಾಡಲು ಮುಂದಾಗಿದ್ದಾರೆ.
ಸದ್ಯ ಮಳೆಯಿಂದಾಗಿ ಹೊಲದಲ್ಲಿನ ಎಲ್ಲ ಬೆಳೆ ನಾಶವಾಗಿದ್ದು, ಖರ್ಚಿಗೆ ದುಡ್ಡು ಇಲ್ಲದಂತಾಗಿದೆ. ಹೀಗಾಗಿ ಎತ್ತುಗಳನ್ನು ಮಾರಿ ಬಂದ ಹಣದಿಂದ ಜೀವನ ಸಾಗಿಸುವ ಸ್ಥಿತಿಗೆ ರೈತ ತಲುಪಿದ್ದು, ಈಗಲಾದರೂ ಸರ್ಕಾರ ಏನಾದರೂ ಪರಿಹಾರ ಕೊಡುತ್ತಾ? ಎಂಬ ಪ್ರಶ್ನೆಗೆ ಯಾರಲ್ಲೂ ಸ್ಪಷ್ಟ ಉತ್ತರವಿಲ್ಲದಾಗಿದೆ.
ಇದನ್ನೂ ಓದಿ : ಕೊಡಗು: ಹುಲಿ ದಾಳಿಗೆ ಗರ್ಭಿಣಿ ಹಸು ಬಲಿ