ಹುಬ್ಬಳ್ಳಿ: ಬೇರೊಬ್ಬರ ಪ್ರೊಫೈಲ್ ಫೋಟೋ ಬಳಸಿಕೊಂಡು ಫೇಸ್ಬುಕ್ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ದೋಚುತ್ತಿರುವ ಪ್ರಕರಣಗಳ ಸಂಖ್ಯೆ ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಸೈಬರ್ ಖದೀಮರ ಜಾಲದೊಳಗೆ ಸಿಲುಕಿದ ಅಮಾಯಕರು ವಂಚನೆಗೊಳಗಾಗಿ ಲಕ್ಷಾಂತರ ಹಣ ಕಳೆದುಕೊಳ್ಳುತ್ತಿದ್ದಾರೆ.
ಜಿಲ್ಲೆಯಾದ್ಯಂತ ಫೇಸ್‌ಬುಕ್ ಮೂಲಕ ಗೆಳೆಯರನ್ನು ಸಾಲ ಕೇಳುವವರ ಸಂಖ್ಯೆ ಜಾಸ್ತಿಯಾಗಿದೆ. ಗೆಳೆಯ ಕಷ್ಟದಲ್ಲಿದ್ದಾನೆ ಎಂದು ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಹಾಕಿ ಲಕ್ಷಾಂತರ ರೂ. ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಪೊಲೀಸರಿಗೂ ತಲೆ ನೋವಾಗಿ ಪರಿಣಮಿಸಿದ್ದು, ಸಚಿವರ ಮಗನಿಗೂ ಈ ಬಿಸಿ ತಟ್ಟಿದೆ.
ವಂಚನೆಗೊಳಗಾದವರ ನಿಖರ ಸಂಖ್ಯೆ ತಿಳಿಯದಿದ್ದರೂ ಅಂದಾಜಿನ ಪ್ರಕಾರ ಧಾರವಾಡ ಜಿಲ್ಲೆಯೊಂದರಲ್ಲಿಯೇ 15 ಸಾವಿರಕ್ಕೂ ಹೆಚ್ಚು ಜನರು ಮೋಸದ ಜಾಲಕ್ಕೆ ಬಿದ್ದು ಈವರೆಗೆ ಹಣ ಕಳೆದುಕೊಂಡಿದ್ದಾರೆ. ಇನ್ನು ವಂಚನೆಗೊಳಗಾದ ಬಹುತೇಕರು ದೂರು ನೀಡುವುದಿಲ್ಲ. ಕೆಲವರು ಮಾತ್ರ ದೂರು ಸಲ್ಲಿಸುತ್ತಾರೆ.
ಯಾವುದಾದರೂ ಲಿಂಕ್ ಕ್ಲಿಕ್ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾವ ಲಿಂಕ್‌ನಲ್ಲಿ ಏನೇನು ಅಡಗಿದೆಯೋ ಎಂಬುದು ಗೊತ್ತಾಗುವುದಿಲ್ಲ. ಕೆಲವೊಂದು ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ನಮ್ಮ ಖಾತೆ ಹ್ಯಾಕ್ ಆಗುವ ಸಾಧ್ಯತೆಯೂ ಇದೆ. ಪಾಸ್‌ವರ್ಡ್ ಸ್ಟ್ರಾಂಗ್ ಆಗಿದ್ದರೆ ಖಾತೆಯೂ ಸುರಕ್ಷಿತವಾಗಿರುತ್ತದೆ. ಆದ್ದರಿಂದ ಎಲ್ಲರೂ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಲಾಬುರಾಮ್ ಸೂಚನೆ ನೀಡಿದ್ದಾರೆ.