ಧಾರವಾಡ: ಫೇಡಾ ನಗರಿ ವಿದ್ಯಾಕಾಶಿ ಎಂದೆಲ್ಲಾ ಕರೆಸಿಕೊಳ್ಳುವ ಧಾರವಾಡ ನಗರ ಇದೀಗ ಧೂಳಿನಿಂದ ಕೂಡಿಕೊಂಡಿದ್ದು, ನಗರದೆಲ್ಲೆಡೆ ಎತ್ತ ನೋಡಿದರೂ ಬರಿ ಧೂಳೇ ಧೂಳು. ಈ ಧೂಳಿನಲ್ಲಿ ತಿರುಗಾಡುವ ಜನರಂತೂ ಕಂಗಾಲಾಗಿ ಹೋಗಿದ್ದು, ಆದಷ್ಟೂ ಬೇಗ ನಮಗೆಲ್ಲಾ ಈ ಧೂಳಿನಿಂದ ಮುಕ್ತಿ ಕೊಡಿಸಿ ಸ್ವಾಮಿ ಎನ್ನುವಂತಾಗಿದೆ. ಸೆಂಟ್ರಲ್ ಮಿನಿಸ್ಟರ್ಗೂ ಈ ಧೂಳಿನ ಬಿಸಿ ತಟ್ಟಿದ್ದು, ನಗರದಲ್ಲಿ ಮೊದಲು ಧೂಳು ಕಡಿಮೆಯಾಗಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಧಾರವಾಡ ಜ್ಯೂಬಲಿ ವೃತ್ತದಿಂದ- ಕೃಷಿ ವಿವಿ ವರೆಗಿನ ರಸ್ತೆ ನಿರ್ಮಾಣ ಕಾರ್ಯದಿಂದಾಗಿ ಈ ಧೂಳು ಹೆಚ್ಚಾಗಿದ್ದು, ನಗರದ ಹಿಂದಿ ಪ್ರಚಾರ ಸಭಾದ ಹತ್ತಿರ, ಯುಬಿ ಹಿಲ್, ಮಾಳಮಡ್ಡಿ, ಕೆಲಗೇರಿ ರಸ್ತೆ ಮುರಘಾಮಠದ ರಸ್ತೆ ಸೇರಿದಂತೆ ರಸ್ತೆ ಮೇಲೆ ತಿರುಗಾಡುವ ಜನರಿಗೆ ಧೂಳು ಹೆಚ್ಚಾಗಿ ಕಂಡು ಬರುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಎಚ್ಚರಿಕೆ ವಹಿಸಿ, ಅಧಿಕಾರಿಗಳ ಮೂಲಕ ಕಡಿಮೆ ಮಾಡದೇ ಹೋದಲ್ಲಿ, ಧೂಳಿನ ಮುಖಾಂತರ ಅಸ್ತಮಾ, ಅಲರ್ಜಿ ರೋಗ ರುಜಿನೆಗಳು ಹೆಚ್ಚಾಗುವ ಸಾಧ್ಯತೆಯಿದೆ.
ಈ ಧೂಳಿನ ಬಿಸಿ ಧಾರವಾಡ ಜಿಲ್ಲೆಯವರಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೂ ತಟ್ಟಿದ್ದು, ಈ ಬಗ್ಗೆ ಸಚಿವರೇ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಗರದಲ್ಲಿ ರಸ್ತೆ ನಿರ್ಮಾಣ ಮಾಡುವಾಗ ಸ್ವಚ್ಚತೆಗೆ ಆದ್ಯತೆ ಕೊಡಿ, ರಸ್ತೆ ನಿರ್ಮಾಣ ಮಾಡುವಾಗ ಮೊದಲು ನೀರು ಹೊಡೆದು ಧೂಳು ಎಳದಂತೆ ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ. ಅಲ್ಲದೇ ಇನ್ನು ಹೆಚ್ಚುವರಿಯಾಗಿ ನಗರದ ಅಂದವನ್ನು ಹೆಚ್ಚಿಸಲು, 300 ಕೋಟಿ ಅನುದಾನ ಸಿಆರ್ಎಫ್ ಅನುದಾನದಲ್ಲಿ ಮಂಜೂರು ಮಾಡಲಾಗಿದೆ. ಜೊತೆಗೆ ಹುಬ್ಬಳ್ಳಿ-ಧಾರವಾಡಕ್ಕೆ ಇನ್ನು ಹೆಚ್ಚಿನ ಸಿಮೆಂಟ್ ರಸ್ತೆಗಳನ್ನು ಮಾಡಿಸಲಾಗುತ್ತೆಯೆಂದು ಕೇಂದ್ರ ಸಚಿವ ಸ್ಪಷ್ಟನೆ ನೀಡಿದ್ದಾರೆ.