ಧಾರವಾಡ: ಕಳೆದ ಕೆಲ ದಿನಗಳ ಹಿಂದೆ ಭಾರೀ ಮಳೆಗೆ ತುಂಬಿದ್ದ ಡೌಗಿ ನಾಲಾ ನೀರು ಸರಬರಾಜು ಇದೀಗ ಖಾಲಿಯಾಗಿದೆ. ಇಡೀ ಅಳ್ನಾವರಕ್ಕೆ ನೀರಿನ ಬವಣೆ ತೀರಿಸುತ್ತಿದ್ದ ನಾಲೆ ಇದೀಗ ಕೊಚ್ಚಿಕೊಂಡು ಹೋಗಿದೆ.
ನಿರಂತರವಾಗಿ ವಾರದ ಹಿಂದಷ್ಟೇ ನೀರು ಸಾಕು ಸಾಕು ಎನ್ನುತ್ತಿದ್ದ ಅಲ್ಲಿನ ಜನರೀಗ ಮುಂದೆ ಕುಡಿಯುವ ನೀರು ಹೇಗೆ? ಎಂದು ಚಿಂತಿಸುವ ಹಾಗಾಗಿದೆ. ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ಡೌಗಿ ನಾಲೆಯಲ್ಲಿ ವಾರದ ಹಿಂದಷ್ಟೇ ಹತ್ತಿರಕ್ಕೂ ಹೋಗುವುದಕ್ಕೆ ಆಗದಂತೆ ಅಬ್ಬರದಲ್ಲಿ ನೀರು ಹರಿಯುತ್ತಿತ್ತು. ಆದರೀಗ ಒಂದೇ ಒಂದು ವಾರದಲ್ಲಿ ಇಡೀ ನಾಲೆ ಖಾಲಿಯಾಗುತ್ತಿದೆ.
ಈ ದೊಡ್ಡ ನಾಲೆ, ಅಳ್ನಾವರ ಪಟ್ಟಣದ ಜನರ ಕುಡಿಯುವ ನೀರಿನ ದಾಹವನ್ನು ತಣಿಸುವ ಜಲ ಮೂಲವೂ ಹೌದು. ಆದ್ರೆ ಕಳೆದ ಬಾರಿಯ ಪ್ರವಾಹಕ್ಕೆ ಈ ನಾಲೆಯ ಬ್ಯಾರೇಜ್ಗೆ ಡ್ಯಾಮೇಜ್ ಆದಾಗ, 15 ಲಕ್ಷ ರೂಪಾಯಿ ಖರ್ಚು ಮಾಡಿ, ತಾತ್ಕಾಲಿಕ ರಿಪೇರಿ ಮಾಡಲಾಗಿತ್ತು. ಈ ಬಾರಿಯ ಮಳೆಯಬ್ಬರಕ್ಕೆ ಮತ್ತೆ ಹೊಡೆತ ಬಿದ್ದಿದ್ದು, ಎಲ್ಲವೂ ನೀರೊಳಗೆ ಹೋಮ ಮಾಡಿದಂತಾಗಿದೆ.