ಹುಬ್ಬಳ್ಳಿ: ಸಾರ್ವಜನಿಕರಿಗೆ ಒಂದಿಲ್ಲೊಂದು ರೀತಿಯಲ್ಲಿ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ನೀಡುವಲ್ಲಿ ದಿನಕ್ಕೊಂದು ಆವಿಷ್ಕಾರದತ್ತ ಚಿಂತನೆ ನಡೆಸುತ್ತಿರುವ ನೈಋತ್ಯ ರೈಲ್ವೆ ವಲಯ ಹಾಗೂ ಭಾರತೀಯ ರೈಲ್ವೆ ಇಲಾಖೆ ಈಗ ಪ್ರಯಾಣಿಕರಿಗಾಗಿ ಮತ್ತೊಂದು ಮಹತ್ವಪೂರ್ಣ ನಿರ್ಧಾರವನ್ನು ಕೈಗೊಂಡಿದೆ.
ಹೌದು, ಇನ್ನು ಮುಂದೆ ನೀವು ರೈಲಿನಲ್ಲಿ ಪ್ರಯಾಣಿಸುವಾಗ ದೂಧ್ ಸಾಗರ್ ವಾಟರ್ ಫಾಲ್ಸ್ ಹಾಗೂ ಬ್ರಿಗಾಂಜಾ ಘಾಟ್ ವೈಭವವನ್ನು ಮಿಸ್ ಮಾಡಿಕೊಳ್ಳುವಂತೆಯೇ ಇಲ್ಲ. ಪ್ರಯಾಣಿಕರು ದೂಧ್ ಸಾಗರ್ ಜಲಪಾತದ ಹಾಗೂ ಬ್ರಿಗಾಂಜಾ ಘಾಟ್ ನೈಸರ್ಗಿಕ ಸೌಂದರ್ಯವನ್ನು ತಾವು ಕುಳಿತ ರೈಲಿನಲ್ಲಿಯೇ ಸವಿಯಬಹುದಾಗಿದ್ದು, ಇದಕ್ಕಾಗಿ ವಿಶೇಷ ಪಾರದರ್ಶಕ ಗ್ಲಾಸ್ ಕೊಟೇಡ್ ಕೋಚ್ಗಳನ್ನು ರೈಲಿಗೆ ಜೋಡಿಸಲು ಚಿಂತನೆ ನಡೆಸಲಾಗುತ್ತಿದೆ.
ಆಧುನಿಕ ವಿದ್ಯಮಾನವುಳ್ಳ ರೈಲ್ವೆ ಕೋಚ್ಗಳನ್ನು ಚೆನ್ನೈ- ವಾಸ್ಕೋ- ಚೆನ್ನೈ ಎಕ್ಸ್ಪ್ರೆಸ್, ವೆಲಂಕನಿ ಎಕ್ಸ್ಪ್ರೆಸ್ ಹಾಗೂ ವಾಸ್ಕೋ - ತಿರುಪತಿ ಎಕ್ಸ್ಪ್ರೆಸ್ ರೈಲುಗಳಿಗೆ ಈ ವಿಶಿಷ್ಠವಾದ ಕೋಚ್ಗಳನ್ನು ಅಳವಡಿಸಲಾಗುತ್ತದೆ. ಅಲ್ಲದೇ ಪ್ರಯಾಣಿಕರು ಪ್ರಯಾಣದ ಸೊಬಗನ್ನು ಅನುಭವಿಸಲು ರೈಲ್ವೆ ಇಲಾಖೆ ಇಂತಹದೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿದೆ.
ಪ್ರಯಾಣದ ಒತ್ತಡವನ್ನು ತಗ್ಗಿಸಲು ಹಾಗೂ ರೈಲ್ವೆ ಪ್ರಯಾಣವನ್ನು ಮತ್ತಷ್ಟು ಜನಪ್ರಿಯಗೊಳಿಸಲು ರೈಲ್ವೆ ಇಲಾಖೆ ಈಗ ಮಹತ್ವದ ಕೆಲಸವನ್ನು ಕೈಗೊಂಡಿದೆ.