ಹುಬ್ಬಳ್ಳಿ: ಕುಂದಗೋಳ ಉಪಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ ಇದೆ. ಈ ಹಿನ್ನೆಲೆ ಕ್ಷೇತ್ರದಲ್ಲಿ ಪಕ್ಷದ ಪ್ರತ್ಯೇಕ ಕಚೇರಿ ತೆರೆಯಲಿದ್ದೇವೆ. ಅದರ ಸಂಪೂರ್ಣ ಜವಾಬ್ದಾರಿ ನಾನೇ ವಹಿಸಿಕೊಳ್ಳಲಿದ್ದೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಕ್ಷೇತ್ರವನ್ನ ದತ್ತು ಪಡೆದುಕೊಳ್ಳುವ ಮೂಲಕ ಅಭಿವೃದ್ಧಿ ಪಡಿಸಲಿದ್ದೇವೆ. ಕುಂದಗೋಳ ಕ್ಷೇತ್ರವನ್ನ ನನ್ನ ಕ್ಷೇತ್ರ ಅಂತಾ ತಿಳಿದು ಅಭಿವೃದ್ಧಿ ಪಡಿಸಲಿದ್ದೇನೆ. ಇನ್ನೂ ನಾಲ್ಕು ವರ್ಷ ಮೈತ್ರಿ ಸರ್ಕಾರವೇ ಮುಂದುವರೆಯಲಿದೆ. ಜನರು ತಮ್ಮ ಮತಗಳನ್ನು ಬಿಜೆಪಿಗೆ ಹಾಕುವ ಮೂಲಕ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ನಾಯಕರನ್ನು ಹತೋಟಿಯಲ್ಲಿ ಇಟ್ಟುಕೊಳ್ಳದ ಸಿದ್ದರಾಮಯ್ಯ ಬಳೆ ತೊಟ್ಟುಕೊಳ್ಳಲಿ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶೋಭಕ್ಕ ಅವರು ಯಾವಾಗ ಬಳೆ ಕಳಿಸಿಕೊಡ್ತಾರೆ ಹೇಳಲಿ, ಬಹಳ ಸಂತೋಷದಿಂದ ಹಾಕಿಕೊಳ್ಳೋಣ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಯಾವುದೇ ಟ್ವೀಟ್ ಬಗ್ಗೆ ಉತ್ತರ ಕೊಡಲ್ಲ. ಇನ್ನೂ ನಾಲ್ಕು ವರ್ಷ ಕುಮಾರಸ್ವಾಮಿಯವರೇ ಸಿಎಂ ಆಗಿರಲಿದ್ದಾರೆ. ಸಿಎಂ ಕುರ್ಚಿ ಯಾವುದೇ ಅಂಗಡಿಯಲ್ಲಿ ಖರೀದಿಗೆ ಸಿಗಲ್ಲ ಎಂದರು.