ಧಾರವಾಡ : ಇಂದು ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರು ಅಕ್ರಮ ರೌಡಿ ಶೀಟರ್ಗಳ ಪರೇಡ್ ನಡೆಸಿದರು. ಯಾವುದೇ ಕಾರಣಕ್ಕೂ ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ತಾಕೀತು ಮಾಡಿದರು. ಕಾನೂನು ಮೀರಿ ವರ್ತಿಸಿದ್ರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಖಡಕ್ ಎಚ್ಚರಿಕೆ ನೀಡಿದರು.
ನಗರದ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಪರೇಡ್ ನಡೆಸಲಾಯ್ತು. ಜಿಲ್ಲೆಯ 10 ಪೊಲೀಸ್ ಠಾಣೆಗಳ 499 ರೌಡಿಗಳ ಪೈಕಿ 150ಕ್ಕೂ ಅಧಿಕ ರೌಡಿಶೀಟರ್ಗಳನ್ನು ಪರೇಡ್ಗೆ ಕರೆತರಲಾಗಿತ್ತು. ಪರೇಡ್‌ನಲ್ಲಿ ಎಸ್ಪಿ ರೌಡಿಗಳ ಮಾಹಿತಿ ಪಡೆದುಕೊಂಡಿದ್ದಲ್ಲದೇ ಅಪರಾಧ ಕೃತ್ಯ ನಡೆಸದಂತೆ ಎಚ್ಚರಿಕೆ ನೀಡಿದರು. 60ವರ್ಷ ಮೇಲ್ಪಟ್ಟವರು ಮತ್ತು ಈಗಾಗಲೇ ಕಳೆದ 10 ವರ್ಷದಿಂದ ಒಳ್ಳೇ ಚಾರಿತ್ರ್ಯ ಹೊಂದಿರುವ ರೌಡಿಶೀಟರ್‌ಗಳನ್ನ ರೌಡಿಶೀಟ್ ಪಟ್ಟಿಯಿಂದ ಕೈಬಿಡೋದಾಗಿ ಹೇಳಿದರು. ಅಷ್ಟೇ ಅಲ್ಲ, ಹೆಸರು ಕೈಬಿಟ್ಟ ಮೇಲೆ ಮತ್ತು ಅಪರಾಧ ಕೃತ್ಯದಲ್ಲಿ ತೊಡಗಿದ್ರೆ ಅಂತವರನ್ನ ಮತ್ತೆ ರೌಡಿಶೀಟ್ ಪಟ್ಟಿಗೆ ಸೇರಿಸೋದಾಗಿ ಎಚ್ಚರಿಸಿದರು.
ನಾಳೆ ಹುಬ್ಬಳ್ಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆಯಲ್ಲಿ ಎಲ್ಲಾ ಕಡೆ ನಾಕಾಬಂದಿ ಹಾಕಲಾಗುವುದು ಅಂತಾ ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿದರು.