ಹುಬ್ಬಳ್ಳಿ: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂವರಿಗೆ ಜೀವಾವಧಿ ಶಿಕ್ಷೆ ಹಾಗೂ 3.60ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದೆ.
ರಾಯನಾಳ ಪಲ್ಲೇದವರ ಓಣಿಯ ಸಿದ್ದಪ್ಪಜಿ ಕೋಳೂರು, ಗದಿಗೆಪ್ಪ ಕೋಳೂರು ಹಾಗೂ ಯಲ್ಲಾಪುರ ಓಣಿಯ ಮಲ್ಲಿಕಾರ್ಜುನ ಬಿ ಚನ್ಲೋಜಿ ಜೀವಾವಧಿ ಶಿಕ್ಷೆಗೊಳಗಾದ ಆರೊಪಿಗಳು.
ಪ್ರಕರಣದ ಹಿನ್ನೆಲೆ: ರಾಯನಾಳದಲ್ಲಿ ಸಂಜಯ ಪಟದಾರಿ ಎಂಬುವವರಿಗೆ ಮುತ್ತವ್ವ ಎಂ.ಅಂಗಡಿಯನ್ನು ಬಾಡಿಗೆಗೆ ಕೊಟ್ಟಿದ್ದರು. ತನ್ನ ವೈಯಕ್ತಿಕ ವಿಚಾರಕ್ಕಾಗಿ ಸಿದ್ದಪ್ಪ ಕೋಳೂರು ಎಂಬಾತ ಸಂಜಯ ಪಟದಾರಿಯನ್ನು ಮನೆ ಬಿಡಿಸುವಂತೆ ಮುತ್ತವ್ವ ಮೇಲೆ ಪದೇ ಪದೆ ಒತ್ತಡ ಹಾಕಿದ್ದನು. ಆ ಸಂದರ್ಭದಲ್ಲಿ ಮನೆ ಖಾಲಿ ಮಾಡಿಸಿಲ್ಲವಾದರೂ ನಂತರ ಸಂಜಯ ಪಟದಾರಿ ಮನೆ ಖಾಲಿ ಮಾಡಿದ್ದನು.
2015ರ ಅಕ್ಟೋಬರ್ 29ರಂದು ರೇವಣಸಿದ್ದಪ್ಪ ಗಂಗನವರ ಮತ್ತು ಸಿದ್ದಪ್ಪ ಕೋಳೂರನ ಸಹೋದರ ಚಂದ್ರು ಕೋಳೂರ ನಡುವೆ ಮನೆ ವಿಚಾರಚಾಗಿ ಜಗಳವಾಗಿತ್ತು. ಈ ಕೋಪದಲ್ಲಿ ಸಿದ್ದಪ್ಪ, ಅದೇ ದಿನ ರಾತ್ರಿ ತನ್ನೊಂದಿಗೆ ಒಂದಿಷ್ಟು ಜನರನ್ನು ಕರೆದುಕೊಂಡು ಹೋಗಿ ಮುತ್ತವ್ವ, ಕಲ್ಲಪ್ಪ, ಬಸವರಾಜನ ಮೇಲೆ ಹಲ್ಲೆ ನಡೆಸಿದ್ದ. ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಬಸವರಾಜು ಕಿಮ್ಸ್ ಆಸ್ಪತ್ರೆಗೆ ತೆರಳುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟರೆ, ಗಾಯಗೊಂಡ ಕಲ್ಲಪ್ಪ ಹಾಗೂ ಮುತ್ತವ್ವ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಘಟನೆಗೆ ಸಂಬಂಧಿಸಿ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು . ಇದಕ್ಕೆ ಸಂಬಂಧಿಸಿ ತನಿಖಾಧಿಕಾರಿ ಇನ್‌ಸ್ಪೆಕ್ಟರ್ ಶ್ರೀಪಾದ ಜಲ್ಲೆ ಅವರು ಒಂಬತ್ತು ಜನರನ್ನು ಬಂಧಿಸಿ, ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ ಪ್ರಕರಣದ ವಿಚಾರಣೆ ನಡೆಸಿದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ಯ ನ್ಯಾಯಾಧೀಶ ಕೆ.ಎನ್.ಗಂಗಾಧರ, ಶಿಕ್ಷೆ ಹಾಗೂ ದಂಡ ಪ್ರಕಟಿಸಿದ್ದಾರೆ.