ಹುಬ್ಬಳ್ಳಿ: ಕೊರೊನಾ ಟೆಸ್ಟಿಂಗ್ ನೀವೂ ಮಾಡ್ತೀರಾ ಎಂದಿದ್ದ ಜಿಲ್ಲಾಡಳಿತದ ಮಾತಿಗೆ ಧಾರವಾಡದ ಡಿಮ್ಹಾನ್ಸ್ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ದಾಖಲೆಯ ಟೆಸ್ಟಿಂಗ್ ಮಾಡುವ ಮೂಲಕ ಡಿಮ್ಹಾನ್ಸ್ ತನ್ನ ಗೌರವವನ್ನು ಇಮ್ಮಡಿಗೊಳಿಸಿದೆ.
ಹೌದು, ಕೊರೊನಾ ವಿರುದ್ಧ ಸಮರ ಸಾರಿರುವ ಕಿಮ್ಸ್ ಆಸ್ಪತ್ರೆಗೆ ಸಮಾನವಾದ ಸಾಧನೆ ಮಾಡಿದೆ. ಡಿಮ್ಹಾನ್ಸ್ ಇದೀಗ ಬರೋಬ್ಬರಿ ಒಂದು ಲಕ್ಷ ಕೊರೊನಾ ಮಾದರಿಗಳನ್ನು ಯಶಸ್ವಿ ಟೆಸ್ಟಿಂಗ್ ಮಾಡುವ ಮೂಲಕ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ, ಒಂದು ಕೋಟಿ ರೂ. ಮೌಲ್ಯದ ಟೆಸ್ಟಿಂಗ್ ಉಪಕರಣಗಳನ್ನು ಪೂರೈಸಿದೆ. ಹೀಗಾಗಿ ಮತ್ತೊಂದು ಆರ್‌ಟಿಪಿಸಿಆರ್ ಟೆಸ್ಟಿಂಗ್ ವಿಭಾಗ ಶುರು ಮಾಡಲಾಗಿದೆ.
ರಾಜ್ಯದಲ್ಲೇ ಅತಿ ಹೆಚ್ಚು ಟೆಸ್ಟಿಂಗ್ ಮಾಡಿದ ಲ್ಯಾಬ್‌ಗಳಲ್ಲಿ ಡಿಮ್ಹಾನ್ಸ್ ಐದನೇ ಸ್ಥಾನ ಹೊಂದಿದ್ದು, ಬೆಂಗಳೂರಿನ ಕಿದ್ವಾಯಿ, ನಿಮ್ಹಾನ್ಸ್, ಬೆಂಗಳೂರು ಮೆಡಿಕಲ್ ಕಾಲೇಜ್, ಕಿಮ್ಸ್ ಹಾಗೂ ಕಲಬುರ್ಗಿ ಲ್ಯಾಬ್‌ಗಳು ಲಕ್ಷಕ್ಕೂ ಹೆಚ್ಚು ಸ್ಯಾಂಪಲ್ಸ್‌ಗಳನ್ನು ಟೆಸ್ಟಿಂಗ್ ಮಾಡಿವೆ.
ಕಳೆದ ಒಂದು ತಿಂಗಳಿಂದ ನಿತ್ಯ ಒಂದು ಸಾವಿರ ಮತ್ತು ಅಧಿಕ ಟೆಸ್ಟಿಂಗ್ ಮಾಡಿದ್ದು, ಕೊರೊನಾ ಲೆಕ್ಕಿಸದೇ ನಮ್ಮ ಸಿಬ್ಬಂದಿ ನಿರಂತರ ಕೆಲಸ ಮಾಡಿದ್ದರಿಂದ ಇದು ಸಾಧ್ಯವಾಗಿದೆ ಎನ್ನುತ್ತಾರೆ ಡಿಮ್ಹಾನ್ಸ್ ನಿರ್ದೇಶಕರು.
ಡಿಮ್ಮಾನ್ಸ್ ಗಿಂತಲೂ ಎರಡು ವಾರ ಮೊದಲೇ ಅಂದರೆ ಏ. 4ರಂದು ಟೆಸ್ಟಿಂಗ್ ಕಾರ್ಯಾರಂಭ ಮಾಡಿರುವ ಹುಬ್ಬಳ್ಳಿ ಕಿಮ್ಸ್ ಇಲ್ಲಿಯವರೆಗೆ 60,150 ಸ್ಯಾಂಪಲ್ಗಳನ್ನು ಪರೀಕ್ಷಿಸಿದೆ, ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಏಪ್ರಿಲ್ 20ರಂದು ಡಿಮ್ಹಾನ್ಸ್ನಲ್ಲಿ ಕೊರೊನಾ ಟೆಸ್ಟಿಂಗ್ ಶುರು ಮಾಡಿತು. ಬೆಂಗಳೂರು ಲ್ಯಾಬ್ಗಳ ನಂತರದಲ್ಲಿ ಕಲಬುರಗಿ ಹಾಗೂ ಡಿಮ್ಮಾನ್ಸ್ ಅತಿಹೆಚ್ಚು ಟೆಸ್ಟ್ ರೇಟಿಂಗ್ ಸ್ಥಾನವನ್ನು ಉಳಿಸಿಕೊಂಡು ಬಂದಿವೆ.
ಧಾರವಾಡದ ಡಿಮ್ಹಾನ್ಸ್ ಲಕ್ಷಕ್ಕೂ ಹೆಚ್ಚು ಟೆಸ್ಟಿಂಗ್ ಮಾಡಿಸಿದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಭೇಟಿ ನೀಡಿ ಕೇಕ್ ಕತ್ತರಿಸಿ ಸಿಬ್ಬಂದಿಗಳ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು. ಡಿಮ್ಹಾನ್ಸ್ ಕೋವಿಡ್-19 ತಪಾಸಣೆಯಲ್ಲಿ ದಾಖಲೆಯನ್ನು ಬರೆದಿದ್ದು, ಸಾರ್ವಜನಿಕರ ಹಾಗೂ ಜಿಲ್ಲಾಡಳಿತದ ಪ್ರಶಂಸೆಗೆ ಪಾತ್ರವಾಗಿದೆ.