ಧಾರವಾಡ: ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಜಿಪ್ಸಂ ಗೊಬ್ಬರದ ಕೊರತೆ ಕಂಡು ಬಂದಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ.
ನಿನ್ನೆ 2020-21ನೇ ಸಾಲಿನ ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳ ವಿವಿಧ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡುವ ಕುರಿತು ಜಿ.ಪಂ ಸಾಮಾನ್ಯ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಲಾಯಿತು.
ಕಳೆದ ಜನವರಿ 9 ಹಾಗೂ ಫೆಬ್ರವರಿ 20 ರಂದು ಜರುಗಿದ ಸಾಮಾನ್ಯ ಸಭೆಗಳ ನಡುವಳಿಕೆಯನ್ನು ದೃಢೀಕರಿಸಿದ ಬಳಿಕ ನಡವಳಿಕೆಗಳ ಮೇಲೆ ತೆಗೆದುಕೊಂಡ ಅನುಸರಣಾ ವರದಿಗಳ ಬಗ್ಗೆ ಚರ್ಚಿಸಲಾಯಿತು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕರಿಗಾರ, ಸದಸ್ಯ ಉಮೇಶ ರಾಮಪ್ಪ ಹೆಬಸೂರ ಅವರು ಜಿಲ್ಲೆಯ ರೈತರಿಗೆ ಯೂರಿಯಾ ಹಾಗೂ ಜಿಪ್ಸಂ ಗೊಬ್ಬರದ ಕೊರತೆ ಕುರಿತು ಚರ್ಚಿಸಿದರು. ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಐ.ಬಿ ಮಾತನಾಡಿ, ಜಿಲ್ಲೆಗೆ ಈ ಬಾರಿ ಬೇಡಿಕೆಗಿಂತ ಹೆಚ್ಚು ಯೂರಿಯಾ ಸರಬರಾಜುಗೊಂಡಿದೆ. ಇನ್ನು 3-4 ದಿನಗಳಲ್ಲಿ 2,650 ಟನ್ ಯೂರಿಯಾ ಬರಲಿದೆ. ಈ ಗೊಬ್ಬರವನ್ನು ಬೇಡಿಕೆ ಇರುವ ಕಡೆ ಸಮರ್ಪಕವಾಗಿ ಹಂಚಿಕೆ ಮಾಡಲಾಗುವುದು ಎಂದರು.
ಜಿಪ್ಸಂ ಗೊಬ್ಬರದ ಬೇಡಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ, ಈ ಕುರಿತು ಸಾಮಾನ್ಯ ಸಭೆಯ ಗೊತ್ತುವಳಿ ನಿರ್ಣಯವನ್ನು ಆಧರಿಸಿ ಸರ್ಕಾರಕ್ಕೆ ಹೆಚ್ಚು ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ, ಕೃಷಿ, ಆರೋಗ್ಯ, ಅರಣ್ಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ತಮ್ಮ ಇಲಾಖೆಯ ಪ್ರಸಕ್ತ ಸಾಲಿನ ಕಾರ್ಯಕ್ರಮಗಳನ್ನು ವಿವರಿಸಿದರು. ಈ ವೇಳೆ, ಜಿ.ಪಂ ಸದಸ್ಯರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.