ಧಾರವಾಡ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾಷಣಕ್ಕೆ ನಿರ್ಬಂಧ ಹಿನ್ನೆಲೆಯಲ್ಲಿ ಹೆಲಿಪ್ಯಾಡ್ ನಲ್ಲಿ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಲು ಧಾರವಾಡ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.
ನಾಳೆ ಧಾರವಾಡದಲ್ಲಿ ಸಂಸದ ಪ್ರಲ್ಹಾದ್ ಜೋಶಿ ಅವರ ಪರ ಚುನಾವಣಾ ಪ್ರಚಾರ ನಡೆಸಬೇಕಿತ್ತು. ಧಾರವಾಡದ ಪ್ರಚಾರ ಮುಗಿದ ಬಳಿಕ ಇಲ್ಲಿಂದ ಅವರು ಕೇರಳದ ವಯನಾಡಿಗೆ ತೆರಳಬೇಕಿತ್ತು. ಆದರೆ, ಉತ್ತರ ಪ್ರದೇಶ ಸಿಎಂ ಹೆಲಿಕಾಪ್ಟರ್ ಲ್ಯಾಂಡಿಂಗ್ಗೆ ಧಾರವಾಡ ಚುನಾವಣಾಧಿಕಾರಿಗಳು ಅವಕಾಶ ನಿರಾಕರಿಸಿದ್ದಾರೆ.
ಚುನಾವಣಾ ಆಯೋಗ ಯೋಗಿ ಆದಿತ್ಯನಾಥ ಅವರಿಗೆ 72 ಗಂಟೆಗಳ ಕಾಲ ಬಹಿರಂಗ ಪ್ರಚಾರ ನಡೆಸದಂತೆ ನಿರ್ಬಂಧ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಧಾರವಾಡದ ಜಿಲ್ಲಾಧಿಕಾರಿಯೂ ಆಗಿರುವ ಚುನಾವಣಾಧಿಕಾರಿಗಳು ಹೆಲಿಕಾಪ್ಟರ್ ಲ್ಯಾಂಡಿಂಗ್ಗೆ ಅವಕಾಶ ನಿರಾಕರಿಸುವ ನಿರ್ಧಾರ ಕೈಗೊಂಡಿದ್ದಾರೆ.
ಆದಿತ್ಯನಾಥ ಸೇರಿದಂತೆ ನಾಲ್ವರಿಗೆ ನಿರ್ಬಂಧಿತ ಸಮಯದಲ್ಲಿ ಅನುಮತಿ ನೀಡದಂತೆ ಕೇಂದ್ರ ಚುನಾವಣಾ ಆಯೋಗದಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಧಾರವಾಡ ಡಿಸಿ ದೀಪಾ ಚೋಳನ್ ಸ್ಪಷ್ಟಪಡಿಸಿದ್ದಾರೆ.
ಯೋಗಿ ಆದಿತ್ಯನಾಥ ಆಗಮನಕ್ಕೆ ಹೆಲಿಪ್ಯಾಡ್ ಗೆ ಅನುಮತಿ ನೀಡುವಂತೆ ಬಿಜೆಪಿಯವರು ಅನುಮತಿ ಕೇಳಿದ್ದರು. ಆದರೆ ನಾವು ಆಯೋಗದ ಸೂಚನೆ ಮೇರೆಗೆ ಯಾವುದೇ ಅನುಮತಿ ನೀಡಿಲ್ಲ ಜಿಲ್ಲಾಧಿಕಾರಿಗಳು ದೃಢಪಡಿಸಿದ್ದಾರೆ.