ಧಾರವಾಡ: ಕೃಷಿ ವಿಶ್ವವಿದ್ಯಾನಿಲಯದಲ್ಲಿರುವ ಕೃಷಿ ಸಮುದಾಯ ಬಾನುಲಿ ಕೇಂದ್ರ ದೇಶದ ಮೊಟ್ಟಮೊದಲ ಕೃಷಿ ಬಾನುಲಿ ಕೇಂದ್ರ ಹಾಗೂ ರೈತರ ರೇಡಿಯೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ 2007ರ ಮೇ 17ರಂದು ಕೃಷಿ ಸಮುದಾಯ ಬಾನುಲಿ ಕೇಂದ್ರ ತನ್ನ ಪ್ರಸಾರ ಕಾರ್ಯ ಆರಂಭಿಸಿತು. ಅಂದಿನ ಕೃಷಿ ಸಚಿವ ಬಂಡೆಪ್ಪಾ ಕಾಶೆಂಪೂರ ಕೃಷಿ ಸಮುದಾಯ ಬಾನುಲಿ ಕೇಂದ್ರ ಉದ್ಘಾಟಿಸಿದ್ದರು. ಇದೀಗ ಈ ಬಾನುಲಿ ಕೇಂದ್ರ ಹದಿನಾಲ್ಕು ವಸಂತಗಳನ್ನು ಪೂರೈಸಿ ಮುನ್ನಡೆಯುತ್ತಿದೆ.
ಮೊದಲು ಶೇ 4ರಷ್ಟಿದ್ದ ಕೇಳುಗರ ಸಂಖ್ಯೆ ಇದೀಗ 65ಕ್ಕೆ ತಲುಪಿದ್ದು, ಬೆಳಗ್ಗೆ 6 ರಿಂದ 9 ಗಂಟೆವರೆಗೆ ಮತ್ತು ಸಂಜೆ 6 ರಿಂದ ರಾತ್ರಿ 7 ಗಂಟೆಗಳವರೆಗೆ ಕೆಲಸ ನಿರ್ವಹಿಸುತ್ತಿದೆ. ಧಾರವಾಡ ಕೃಷಿ ವಿವಿಯಿಂದ ಸುಮಾರು 15-20 ಕಿಲೋ ಮೀಟರ್ ವ್ಯಾಪ್ತಿ ಹೊಂದಿರುವ ಬಾನುಲಿ ಕೇಂದ್ರ ರೈತರಿಗಾಗಿ ಅನೇಕ ವಿಭಿನ್ನ ಕಾರ್ಯಕ್ರಮ ಪ್ರಸಾರಗೊಳಿಸುವ ಮೂಲಕ ದೇಶದ ಮೊಟ್ಟಮೊದಲ ಕೃಷಿ ಬಾನುಲಿ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೃಷಿ ಕಾರ್ಯಕ್ರಮ:
ಕೃಷಿ ಬಾನುಲಿ ಕೇಂದ್ರವು ರೈತರಿಗಾಗಿ ಕೃಷಿ ಚಿಂತನಾ, ಕೃಷಿ ಕುಟುಂಬ, ಹೈನುಗಾರಿಕೆ, ಮೀನುಗಾರಿಕೆ, ಗೃಹ ಕೈಗಾರಿಕೆ ಸೇರಿದಂತೆ ವಿವಿಧ ವಿನೂತನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಮುಖ್ಯವಾಗಿ ಗ್ರಾಮೀಣ ಭಾಗದ ಜಾನಪದ ಶೈಲಿಯ ಸೋಬಾನ ಪದ, ಹಂತಿ ಪದ, ಭಜನಾಪದ, ರೈತಗೀತೆಗಳನ್ನು ಪ್ರಸಾರ ಮಾಡುವ ಮೂಲಕ ಕೇಳುಗಳ ಸಂಖ್ಯೆ ಹೆಚ್ಚಿಸಿಕೊಂಡಿದೆ.
ಈ ಬಾನುಲಿ ಕೇಂದ್ರದಲ್ಲಿ ಇದುವರೆಗೆ ಸುಮಾರು 15 ಸಾವಿರ ಗೀತೆಗಳನ್ನು ಪ್ರಸಾರ ಮಾಡಲಾಗಿದ್ದು, ಬಾನುಲಿ ಕೇಂದ್ರದ ಮೇಲೆ 10 ಪ್ರಬಂಧಗಳನ್ನು ತಯಾರಿಸಲಾಗಿದೆ. 250 ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ರೆ, 5 ಸಿಬ್ಬಂದಿ ಖಾಯಂ ಕೆಲಸ ಮಾಡುತ್ತಿದ್ದಾರೆ.
1980-90ರ ಕಾಲದಲ್ಲಿ ರೇಡಿಯೋ ಒಂದು ಪ್ರಮುಖ ಮಾಧ್ಯಮವಾಗಿತ್ತು. ಆದರೆ ಕಾಲ ಬದಲಾದಂತೆ ರೇಡಿಯೋ ಅಸ್ತಿತ್ವ ಕಳೆದುಕೊಂಡಿತು. ಈ ಮಧ್ಯೆಯೂ ಧಾರವಾಡದಲ್ಲಿರುವ ಕೃಷಿ ಬಾನುಲಿ ಕೇಂದ್ರ ರೈತರ ಪರವಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ.
ಓದಿ: ಬೀದಿಯಲ್ಲೇ ಮಲಗಿದ ಸೇನಾ ರ‍್ಯಾಲಿ ಅಭ್ಯರ್ಥಿಗಳು.. ಇದಕ್ಕೆ ಹೀಗಂತಾರೆ ಜಿಲ್ಲಾಧಿಕಾರಿಗಳು