ಧಾರವಾಡ: ಅಕ್ಷಯ ತೃತೀಯ ದಿನದಂದು ಕಡಿಮೆ ದರಕ್ಕೆ ಚಿನ್ನ ಕೊಡುವುದಾಗಿ ಆಮಿಷವಡ್ಡಿ 15 ಲಕ್ಷ ರೂಪಾಯಿ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಿದ್ಯಾಗಿರಿ ಪೊಲೀಸರು ಬಂಧಿಸಿದ್ದಾರೆ ಎಂದು ಹು-ಧಾ ಪೊಲೀಸ್ ಕಮೀಷನರ್ ಎಂ.ಎನ್.ನಾಗರಾಜ್ ತಿಳಿಸಿದರು.
ನಗರದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾಲರ್ಸ್ ಕಾಲೋನಿ ನಿವಾಸಿ ಅಪ್ರೋಜ್ ಖಾನ್ ಹೊನ್ನಳ್ಳಿ, ಕಮರಿಪೇಟೆಯ ಮಹ್ಮದ ಅಸ್ಲಂ ಐನಾಪೂರಿ, ಬಂಡಿವಾಡ ಅಗಸಿಯ ಆಸೀಫ್ ಸಾಗರ ಕಚ್ಚಿ ಎಂಬುವವರೇ ಬಂಧಿತ ಆರೋಪಿಗಳು. ಇವರ ಜೊತೆ ಇನ್ನೂ ಐವರು ಇರುವ ಶಂಕೆ ಇದೆ ಎಂದರು.
ಅಕ್ಷಯ ತೃತೀಯ ದಿನದಂದು ಕಡಿಮೆ ದರಕ್ಕೆ ಚಿನ್ನ ಕೊಡುವುದಾಗಿ ಕರೆಯ ಮೂಲಕ ಸಂಪರ್ಕಿಸಿದ ಆರೋಪಿಗಳು ಚಳ್ಳಕೇರಿಯ ಜೆ.ಆರ್.ರವಿಕುಮಾರ್ ಅವರನ್ನು ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಚಾಕು ತೋರಿಸಿ ಅವರ ಬಳಿ ಇದ್ದ 15 ಲಕ್ಷ ಹಣವನ್ನು ದೋಚಿಕೊಂಡು ಹೋಗಿದ್ದರು. ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳ ಬೆನ್ನು ಬಿದ್ದಿದ್ದರು. ಡಿಸಿಪಿ ಡಿ.ಎಲ್.ನಾಗೇಶ, ಶಿವಕುಮಾರ ಹಾಗೂ ಎಸಿಪಿ ಎಂ.ಎನ್.ರುದ್ರಪ್ಪ ಅವರ ತಂಡ ಆರೋಪಿಗಳಿಗೆ ಬಲೆ ಬೀಸಿತ್ತು.
ಬಂಧಿತರಿಂದ ಒಂದು ಸ್ಕೋಡಾ ಕಾರು, ರಾಯಲ್ ಎನ್ಫಿಲ್ಡ್ ಬೈಕ್, ಹೊಂಡಾ ಡಿಯೋ ಸ್ಕೂಟಿ, ಎರಡು ಚಾಕು ಹಾಗೂ ನಾಲ್ಕು ಮೊಬೈಲ್ ಸೇರಿದಂತೆ 23.45 ಲಕ್ಷ ರೂ. ನಗದು ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.