ಹುಬ್ಬಳ್ಳಿ: ಸಿಎಎ, ಎನ್ಆರ್ಸಿ ಕಾಯ್ದೆ ವಿರೋಧಿಸಿ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಲದ ವತಿಯಿಂದ ಶಾಸಕ ಪ್ರಸಾದ ಅಬ್ಬಯ್ಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ವಿವಿಧ ದಲಿತ ಸಂಘಟನೆಗಳು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಗರದ ಪ್ರಧಾನ ಅಂಚೆ ಕಚೇರಿ ಎದುರಿನ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಲ್ಯಾಮಿಂಗ್ಟನ್ ರಸ್ತೆ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ಚೆನ್ನಮ್ಮ ವೃತ್ತದ ಮೂಲಕ ತಹಶೀಲ್ದಾರರ ಕಚೇರಿ ತಲುಪಿ ನಂತರ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಲ್ಪಸಂಖ್ಯಾತ ಸಮುದಾಯ, ಪ್ರಗತಿಪರ ವೇದಿಕೆಗಳು ನಿರಂತರ ಹೋರಾಟ ಮಾಡುತ್ತಾ ಬಂದಿದ್ದು, ನಮ್ಮ ವಿರೋಧ ಇದೇ ರೀತಿ ಮುಂದುವರಿಯುತ್ತದೆ ಎಂದರು.
ಕೇಂದ್ರದ ಬಿಜೆಪಿ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದು ದೇಶದ ಮುಸ್ಲಿಂರ ಜೊತೆಗೆ ಹಿಂದೂಗಳಿಗೂ ಅನ್ಯಾಯ ಮಾಡುತ್ತಿದ್ದು, ಇದು ಕರಾಳ ಕಾಯ್ದೆ ಆಗಿದೆ. ಕೇವಲ ದಾಖಲೆಗಳ ಮೂಲಕವೇ ಪೌರತ್ವ ನೀಡುವುದು ಖಂಡನೀಯವಾಗಿದೆ. ಮೊದಲೇ ದೇಶ ಆರ್ಥಿಕವಾಗಿ ದಿವಾಳಿಯಾಗಿದ್ದು, ಈ ವೇಳೆ ಪೌರತ್ವ ಕಾಯ್ದೆಯಿಂದಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿರುವುದು ಖಂಡನೀಯ. ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.