ಹುಬ್ಬಳ್ಳಿ: ಉರಿಗೌಡ-ನಂಜೇಗೌಡ ಐತಿಹಾಸಿಕ ಪಾತ್ರಗಳು. ಟಿಪ್ಪು ಸುಲ್ತಾನ್ ನನ್ನು ಕೊಂದಿದ್ದು ಅವರೇ ಎಂಬುದು ಸತ್ಯ, ಅದನ್ನು ಎಷ್ಟು ಕಾಲ ಮರೆಮಾಚಲಾಗುತ್ತದೆ. ಟಿಪ್ಪು ಇನ್ನೂ ಹೆಚ್ಚು ಕಾಲ ಬದುಕಿದ್ದಿದ್ದರೆ ಹಾಸನವು ಕೈಮಾಬಾದ್ ಆಗಿರುತ್ತಿತ್ತು ಎಂದು ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿಕ್ರಿಯಿಸಿದರು.
ಕುಂದಗೋಳ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿ ಅತೀ ಹೆಚ್ಚಿನ ಸ್ಥಾನಗಳಿಸಿ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. ನಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ರಿಪೋರ್ಟ್ ಕಾರ್ಡ್ ಜನರ ಮುಂದೆ ಇಡುತ್ತಿದ್ದೇವೆ. ಸ್ಪಷ್ಟ ಬಹುಮತ ಕೊಡುವಂತೆ ಜನರಲ್ಲಿ ಮನವಿ ಮಾಡುತ್ತಿದ್ದೇವೆ. ಫಲಾನುಭವಿಗಳನ್ನು ಮತದಾರರಾಗಿ ಬದಲಿಸಿದರೆ ಕಾಂಗ್ರೆಸ್ ಮತ್ತು ಜೇಡಿಎಸ್ ಠೇವಣಿ ಉಳಿಯಲ್ಲ ಎಂದರು.
ಜಾತಿ ತಾರತಮ್ಯ ಮಾಡದೆ ಜನರಿಗೆ ಯೋಜನೆಗಳನ್ನು ತಲುಪಿಸಿದ್ದೇವೆ, ಬಿಜೆಪಿಯವರು ಮೀಸಲಾತಿ ವಿರೋಧಿಗಳೆಂದು ವಿಪಕ್ಷದವರು ಹೇಳುತ್ತಿದ್ದರು. ಈಗ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಿಸಿ ನಮ್ಮ ಬದ್ಧತೆ ಸಾಬೀತುಪಡಿಸಿದ್ದೇವೆ. ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಮಾಡಿದ್ದೇವೆ. ವೋಟು ಮೊದಲಲ್ಲ, ರಾಷ್ಟ್ರ ಮೊದಲು ಅನ್ನೋದು ಬಿಜೆಪಿ ನೀತಿ. ಓಟು ಮೊದಲು ಅನ್ನೋರು ಕುಕ್ಕರ್ ಬಾಂಬ್‌ನಲ್ಲಿ ಎಷ್ಟು ಓಟ್ ಬರುತ್ತೆ ಅಂತಾ ಲೆಕ್ಕ ಹಾಕ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಈಗ ರಾಜ್ಯದಲ್ಲಿ ಕಾಂಗ್ರೆಸ್ ಟೆಂಟ್ ಕಿತ್ತು ಹೋಗ್ತಿದೆ: ಕಾಂಗ್ರೆಸ್ ಪಕ್ಷದವರು ಜನರಿಗೆ ಗ್ಯಾರಂಟಿ ಕಾರ್ಡ್ ಅನ್ನೋ ಫಾಲ್ಸ್ ಕಾರ್ಡ್ ಕೊಡುತ್ತಿದೆ. ಕಾಂಗ್ರೆಸ್ ಪಕ್ಷದ ವಾರಂಟಿ ಮುಗಿದು ಹೋಗಿದೆ, ಇವರೇನು ಗ್ಯಾರಂಟಿ ಕಾರ್ಡ್ ಕೊಡ್ತಾರೆ? ಟೆಂಟ್ ಕೀಳುವ ಮೊದಲು ಕಸ ಗುಡಿಸ್ತಾರೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಟೆಂಟ್ ಕಿತ್ತು ಹೋಗ್ತಿದೆ. ಹೀಗಾಗಿ ಸಿಕ್ಕಷ್ಟು ಗುಡಿಸೋಣ ಅಂತಾ ಹೊರಟಿದ್ದಾರೆ. ಅವರ ನಾಯಕರು ಆಲೂಗಡ್ಡೆ ಹಾಕಿ ಬಂಗಾರ ತೆಗೆಯಿರಿ ಅಂತಾ ಹೇಳಿದ್ದರು, ಈಗ ಸುಳ್ಳು ಗ್ಯಾರಂಟಿ ಕಾರ್ಡ್ ಕೊಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಲಜ್ಜೆ ಬಿಟ್ಟು ಸುಳ್ಳು ಹೇಳುತ್ತಾರೆ. ನಾನು ರಾಷ್ಟ್ರವಾದಿ ರಾಜಕಾರಣಿ, ನಾನು ಯಾವತ್ತೂ ಜಾತಿ ರಾಜಕರಣ ಮಾಡಿಲ್ಲಾ. ಕುಮಾರಸ್ವಾಮಿ ದೃಷ್ಟಿಯಲ್ಲಿ ಟಿಪ್ಪು ಸುಲ್ತಾನ್ ಬದುಕಿದ್ದಿದ್ದರೆ ಹಾಸನಕ್ಕೆ ಕೈಮಾಬಾದ್ ಎಂದು ಹೆಸರು ಇಡುತ್ತಿದ್ದರು, ಅವರಿಗೆ ಹಾಸನ ಎಂದು ಕರೆಯಲು ಇಷ್ಟ ಇಲ್ಲ, ಕೈಮಾಬಾದ್ ಎಂದು ಕರೆಯಲು ಇಷ್ಟ ಅನ್ನಿಸುತ್ತೆ. ಕೈಮಾಬಾದ್ ಎಂದು ಕರೆಸಿಕೊಳ್ಳಲು ಅವರಿಗೆ ಇಷ್ಟ ಇದ್ದರೆ ಅದು ಅವರ ದುರದೃಷ್ಟಕರ ಎಂದರು.
ಕುಂದಗೋಳ ಟಿಕೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ಗೆಲ್ಲುವ ಸಾಧ್ಯತೆ ಆಧರಿಸಿ ಪಕ್ಷದ ರಾಜ್ಯ ಸಮಿತಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ನಮ್ಮ ಪಕ್ಷಕ್ಕೆ ರಾಷ್ಟ್ರ ಮೊದಲು ಎಂಬುದು ನೀತಿಯಾಗಿದೆ. ವೋಟ್ ಮೊದಲು ಎಂಬುವವರು ಕುಕ್ಕರ್ ಬಾಂಬ್ ಸಮರ್ಥಿಸಿಕೊಳ್ಳುತ್ತಾರೆ. ಯಡಿಯೂರಪ್ಪ ಮಾರ್ಗದರ್ಶನ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಹೇಳಿದರು.
ಧಾರವಾಡದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ವಿದ್ಯುಕ್ತ ಚಾಲನೆ: ಧಾರವಾಡ ಜಿಲ್ಲೆಯಲ್ಲಿ ಕಮಲ ಪಾಳೆಯ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಸಾಕಷ್ಟು ಕಸರತ್ತು ನಡೆಸುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ 72ರಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಹುಬ್ಬಳ್ಳಿಯ ಮೂರುಸಾವಿರಮಠದ ಆವರಣದಿಂದ ಆಯೋಜಿಸಲಾಗಿರುವ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಿ.ಟಿ.ರವಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವರುಗಳಾದ ಗೋವಿಂದ ಕಾರಜೋಳ, ಸಿ. ಸಿ ಪಾಟೀಲ್ ಹಾಗೂ ಜಿಲ್ಲೆಯ ನಾಯಕರಿಗೆ ಮಂಗಳಾರತಿ ಬೆಳಗುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಇನ್ನೂ ವಿಜಯ ಸಂಕಲ್ಪ ಯಾತ್ರೆಯು ಮೂರುಸಾವಿರಮಠದ ಆವರಣದಿಂದ ಪ್ರಾರಂಭಗೊಂಡು ಎಸ್.ಟಿ.ಭಂಡಾರಿ ಅಂಗಡಿ, ದಾಜಿಬಾನ್ ಪೇಟ ತುಳಜಾಭವಾನಿ ವೃತ್ತ, ಬೆಳಗಾವಿ ಗಲ್ಲಿ, ಜವಳಿ ಸಾಲ, ಸರಾಫ ಗಟ್ಟಿ, ಬಾರ್ದಾನ್ ಸಾಲ, ರಾಧಾಕೃಷ್ಣಗಲ್ಲಿಯ ಮುಖಾಂತರ ದುರ್ಗದ ಬೈಲ್ ವೃತ್ತದಲ್ಲಿ ಸಂಚರಿಸುವ ಮೂಲಕ ಸಂಚಲನ ಸೃಷ್ಟಿಸಿದೆ.
ಇದನ್ನೂ ಓದಿ:ಬಿಜೆಪಿ ಸೃಷ್ಟಿಸಿದ ಉರಿಗೌಡ ನಂಜೇಗೌಡ ಹೆಸರಲ್ಲಿ ಸಿನಿಮಾ: ಮುನಿರತ್ನ ವಿರುದ್ಧ ಹೆಚ್ಡಿಕೆ ಕಿಡಿ