ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಗುಡೇನಕಟ್ಟಿ, ನಾಗರಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಮಳೆ ಹಾಗೂ ನೆರೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಆದರೆ ಕೃಷಿ ಅಧಿಕಾರಿಗಳು ಮಾತ್ರ ಇತ್ತ ತಿರುಗಿಯೂ ನೋಡುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಣ್ಣಿಹಳ್ಳ ಹಾಗೂ ಸಣ್ಣ ಪುಟ್ಟ ಹಳ್ಳಗಳು ಉಕ್ಕಿ ಹರಿದಿದ್ದು, ಹಳ್ಳದ ದಂಡೆಯಲ್ಲಿ ಬೆಳೆದಿರುವ ಸಾವಿರಾರು ಹೆಕ್ಟೇರ್ ಪ್ರದೇಶದ ಮುಂಗಾರು ಬೆಳೆಯನ್ನು ಆಪೋಷನ ಮಾಡಿದೆ. ಮಳೆಗಾಲದಲ್ಲಿ ಮೈದುಂಬಿ ಅಬ್ಬರಿಸುವ ಮೂಲಕ ಇಲ್ಲಿನ ಬೆಣ್ಣಿಹಳ್ಳ ಸೇರಿದಂತೆ ಹಳ್ಳ ಕೊಳ್ಳಗಳು ರೈತರ ಬೆಳೆ ಹಾನಿ ಮಾಡುತ್ತವೆ.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಬೆಣ್ಣಿಹಳ್ಳದ ಮೇಲ್ಭಾಗದ ಪ್ರದೇಶಗಳಾದ ಹುಬ್ಬಳ್ಳಿ, ಧಾರವಾಡಗಳಲ್ಲಿ ಹೆಚ್ಚು ಮಳೆ ಸುರಿದು 5 ದಿನ ಈ ಬೆಣ್ಣಿಹಳ್ಳದಲ್ಲಿ ಪ್ರವಾಹ ಬಂದು ಹಳ್ಳದ ತಟಕ್ಕೆ ಹೊಂದಿಕೊಂಡಿರುವ ಬೆಳೆಗಳನ್ನು ನಾಶ ಮಾಡಿ ರೈತರಿಗೆ ಸಂಕಷ್ಟ ತಂದಿತ್ತು. ಅದೆ ರೀತಿ ಈ ವರ್ಷವೂ ಹಳ್ಳದ ಮೇಲ್ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದು ಕಳೆದ ಮೂರು ದಿನಗಳಿಂದ ಬೆಣ್ಣೆಹಳ್ಳ ಉಕ್ಕಿ ಹರಿದಿದೆ. ಪರಿಣಾಮ, ರೈತ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಈರುಳ್ಳಿ, ಹೆಸರು, ಬಿ.ಟಿ. ಹತ್ತಿ, ಸೂರ್ಯಕಾಂತಿ, ಗೋವಿನಜೋಳ ಮುಂತಾದ ಬೆಳೆಗಳು ಕೊಚ್ಚಿಕೊಂಡು ಹೋಗಿವೆ.
ಕಳೆದ ಬೇಸಿಗೆಯಲ್ಲಿ ರೈತರು ಎನ್‌ಆರ್‌ಜಿ ಯೋಜನೆಯಲ್ಲಿ ತಮ್ಮ ಜಮೀನುಗಳ ಬದು ನಿರ್ಮಾಣ ಮಾಡಿಕೊಂಡು, ಬಿತ್ತನೆ ಮಾಡಿ ಉತ್ತಮ ಬೆಳೆ ಬೆಳೆದಿದ್ದರು. ಆದರೆ ಈ ಬೆಣ್ಣಿಹಳ್ಳದ ಪ್ರವಾಹದಿಂದ ರೈತರ ಜಮೀನುಗಳಲ್ಲಿ ನಿರ್ಮಾಣವಾದ ಬದುಗಳು ನೀರಿನ ಪ್ರವಾಹಕ್ಕೆ ಕಿತ್ತುಕೊಂಡು ಹೋಗಿ ಬೆಳೆ ನಾಶವಾಗಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.