ಹುಬ್ಬಳ್ಳಿ: ಕಲಘಟಗಿ ಬಣ್ಣದ ತೊಟ್ಟಿಲು ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ರಾಜಕಾರಣಿ, ಜನಪ್ರತಿನಿಧಿಗಳ ಮಕ್ಕಳು, ಮೊಮ್ಮಕ್ಕಳಿಗೆ ಕಲಘಟಗಿ ತೊಟ್ಟಿಲು ಉಡುಗೊರೆಯಾಗಿ ನೀಡುವುದು ಹೊಸ ಟ್ರೆಂಡ್ ಆಗಿದೆ.
ನಟ ದಿವಂಗತ ಚಿರಂಜೀವಿ ಸರ್ಜಾ ಮಗುವಿಗೂ ಕೂಡ ಕಲಘಟಗಿಯ ತೊಟ್ಟಿಲನ್ನು ನೀಡಲಾಗಿದ್ದು, ಚಿರಂಜೀವಿ ಸರ್ಜಾ ಅವರ ಮನೆಗೆ ತೊಟ್ಟಿಲು ತಲುಪಿದೆ.
ನಟಿ ಮೇಘನಾ ರಾಜ್ ಅಕ್ಟೋಬರ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆ ಮಗುವಿಗಾಗಿ ಕಲಘಟಗಿಯ ಕಲಾವಿದರು ತೊಟ್ಟಿಲು ತಯಾರಿಸಿದ್ದಾರೆ. ಇವರು ತಯಾರಿಸುವ ತೊಟ್ಟಿಲುಗಳು ರಾಜ್ಕುಮಾರ್, ಯಶ್ ಕುಟುಂಬ, ನಲ್ಲೂರು ಅರಮನೆ, ಗೋವಾ, ಕೇರಳ, ತಮಿಳುನಾಡು ಮತ್ತು ಅಮೆರಿಕಾ ಹೀಗೆ ದೇಶ, ವಿದೇಶಗಳಲ್ಲಿ ಸಾಕಷ್ಟು ಸುದ್ದಿ ಮಾಡಿವೆ.
ಎರಡು– ಮೂರು ತಲೆಮಾರಿನಿಂದ ತೊಟ್ಟಿಲು ಮಾಡುವ ಕಾಯಕ ಮಾಡಿಕೊಂಡು ಬಂದಿರುವ ಮಾರುತಿ ಬಡಿಗೇರ, ತಿಪ್ಪಣ್ಣ ಬಡಿಗೇರ, ಹರೀಶ್, ಶ್ರೀಶೈಲ ಬಡಿಗೇರ ಅವರು ಚಿರಂಜೀವಿ ಸರ್ಜಾ ಪುತ್ರನಿಗಾಗಿ ಒಂದೂವರೆ ತಿಂಗಳಲ್ಲಿ ತೊಟ್ಟಿಲು ತಯಾರಿಸಿದ್ದಾರೆ. ಹಾವೇರಿ ಜಿಲ್ಲೆ ಗುತ್ತಲದ ಸ್ತ್ರೀ ಶಕ್ತಿ ಸೇವಾ ಸಂಸ್ಥೆ ಅಧ್ಯಕ್ಷೆ ವನಿತಾ ಸ್ವಯಂಪ್ರೇರಿತರಾಗಿ ಸ್ವಂತ ಹಣದಿಂದ ತೊಟ್ಟಿಲು ಮಾಡಿಸಿದ್ದು, ಸರ್ಜಾ ಕುಟುಂಬಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ತೊಟ್ಟಿಲಿನ ಸುತ್ತಲೂ ಕೃಷ್ಣನ ಬಾಲ್ಯದ ಘಟನೆಗಳು, ತುಂಟಾಟಗಳು, ಬೆಣ್ಣೆಯೊಂದಿಗೆ ಕೃಷ್ಣ ಹೀಗೆ ಅನೇಕ ಕಥೆಗಳನ್ನು ಹೇಳಲು ಪ್ರೇರೇಪಿಸುವ ಚಿತ್ರಗಳನ್ನು ಸುಂದರವಾಗಿ ಬಿಡಿಸಲಾಗಿದೆ. ತೊಟ್ಟಿಲಿನ ಸ್ಟಾಂಡ್ಗೆ ಸಣ್ಣ ಸಣ್ಣ ಗಂಟೆಗಳನ್ನು ಕಟ್ಟಿದ್ದು, ಕಣ್ಮನ ಸೆಳೆಯುವ ಬಣ್ಣಗಳಿಂದ ಅಲಂಕರಿಸಲಾಗಿದೆ.