ಹುಬ್ಬಳ್ಳಿ: ಕೋವಿಡ್ ಎರಡನೇ ಅಲೆ ತಡೆಗೆ ರಾಜ್ಯಾದ್ಯಂತ ಸಂಪೂರ್ಣ ಕರ್ಫ್ಯೂ ಘೋಷಣೆ ಮಾಡಲಾಗಿದೆ. ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ರೈಲ್ವೆ ಹಾಗೂ ವಿಮಾನಯಾನ ತಮ್ಮ ಸೇವೆ ಮುಂದುವರೆಸಿವೆ. ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಈ ಸೇವೆಯನ್ನು ಬಳಸುತ್ತಿದ್ದು, ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಕೊರೊನಾ ಮಹಾಮಾರಿ ಶರವೇಗದಲ್ಲಿ ಹರಡುತ್ತಿದೆ. ಇದರ ತಡೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿವೆ. ಇದಕ್ಕಾಗಿ ಕೊರೊನಾ ಕರ್ಫ್ಯೂ ಜಾರಿ ಮಾಡಲಾಗಿದ್ದು, ಬಸ್ ಹಾಗೂ ಇನ್ನಿತರೆ ಸಾರಿಗೆ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದು, ರೈಲ್ವೆ ಹಾಗೂ ವಿಮಾನ ಸೇವೆ ಮುಂದುವರೆದಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ನೈಋತ್ಯ ರೈಲ್ವೆ ಜನರಿಗೆ ಉತ್ತಮ ಸೇವೆ ನೀಡುತ್ತಿದೆ.
ಈಗಾಗಲೇ ಹುಬ್ಬಳ್ಳಿ ನೈಋತ್ಯ ರೈಲ್ವೆ ನಿಲ್ದಾಣದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಪಾಡುವುದರ ಜತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗುತ್ತಿದೆ. ಒಂದು ವೇಳೆ ಮಾಸ್ಕ್ ಇಲ್ಲದೇ ಸಂಚಾರ ಮಾಡಿದರೆ 250 ರೂಪಾಯಿಯಿಂದ 500 ರೂಪಾಯಿವರೆಗೆ ದಂಡ ಬೀಳುವುದು ಗ್ಯಾರಂಟಿ. ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಸಾರ್ವಜನಿಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದು, ಜನರಲ್ಲಿ ಮಾಸ್ಕ್ ಧರಿಸುವ ಬಗ್ಗೆ ಹಾಗೂ ಪ್ರಯಾಣದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಸಲಹೆ ನೀಡುತ್ತಿದ್ದಾರೆ.
ಇದನ್ನೂ ಓದಿ: ರೈಲ್ವೆ ನಿಲ್ದಾಣ, ಏರ್ಪೋರ್ಟ್ಗಳಲ್ಲಿ ಪಾಲನೆ ಆಗುತ್ತಿದೆಯೇ ಕೋವಿಡ್ ನಿಯಮಗಳು?
ಅದರಂತೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲೂ ಕೂಡ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾಸ್ಕ್, ಸ್ಯಾನಿಟೈಸರ್ ಬಳಸುವಿಕೆ, ಸಾಮಾಜಿಕ ಅಂತರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸರ್ಕಾರದ ನಿರ್ದೇಶನಗಳನ್ನು ವಿಮಾನ ನಿಲ್ದಾಣದಲ್ಲಿ ಕಟ್ಟನಿಟ್ಟಿನಿಂದ ಪಾಲನೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ವ್ಯವಸ್ಥಾಪಕ ಪ್ರಮೋದ ಠಾಕ್ರೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.