ಹುಬ್ಬಳ್ಳಿ: ಕೋವಿಡ್ ಎರಡನೇ ಅಲೆ ಸೃಷ್ಟಿಸಿರುವ ಅವಾಂತರದಿಂದ ಬೀದಿಬದಿಯ ವ್ಯಾಪಾರಿಗಳು ಮತ್ತೆ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಮುಂದೇನು ಎಂಬ ಆತಂಕದಲ್ಲಿ ಹುಬ್ಬಳ್ಳಿ ವ್ಯಾಪಾರಸ್ಥರಿದ್ದಾರೆ.
ಕಳೆದ ವರ್ಷಾರಂಭದಲ್ಲಿ ದೇಶಕ್ಕೆ ವಕ್ಕರಿಸಿದ ಕೊರೊನಾ ಮಹಾಮಾರಿಯಿಂದ ಈಗಾಗಲೇ ಹೈರಾಣಾಗಿರುವ ಜನತೆಗೆ ಇದೀಗ ಕೋವಿಡ್ ಎರಡನೇ ಅಲೆ ಭಾರೀ ಭೀತಿ ಸೃಷ್ಟಿಸಿದೆ. ಇನ್ನೇನು ಕೊರೊನಾ ಹೋಯಿತು ಎಂದು ನಿಟ್ಟುಸಿರು ಬಿಡುವ ಮುನ್ನವೇ ಕೊವಿಡ್ ಎರಡನೇ ಅಲೆ ವಕ್ಕರಿಸಿದ್ದು, ಜನರನ್ನು ಮತ್ತೆ ಆತಂಕಕ್ಕೀಡು ಮಾಡಿದೆ.
ಎರಡನೇ ಅಲೆಯ ಭೀತಿಯಿಂದಾಗಿ ಸಣ್ಣ ಮತ್ತು ಬೀದಿಬದಿಯ ವ್ಯಾಪಾರಿಗಳು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಮೊದಲ ಹಂತದ ಕೊರೊನಾದಲ್ಲೇ ಪ್ರತಿ ಕ್ಷೇತ್ರವೂ ನಲುಗಿ ಹೋಗಿದ್ದಾರೆ. ಹಂತ ಹಂತವಾಗಿ ಚೇತರಿಕೆ ಕಂಡರೂ ಸಂಪೂರ್ಣ ಸುಧಾರಿಸಿಕೊಳ್ಳುವ ಸಮಯದಲ್ಲಿ ಎರಡನೇ ಅಲೆ ಶಾಕ್ ನೀಡಿದೆ. ಅದರಲ್ಲೂ ಬೀದಿಬದಿ ವ್ಯಾಪಾರಿಗಳು, ಆಟೋ ಚಾಲಕರು, ಹೋಟೆಲ್ ಉದ್ಯಮ, ಸಣ್ಣ ಪುಟ್ಟ ವ್ಯಾಪಾರೋದ್ಯಮ ಕೊರೊನಾ ಕೆಂಗಣ್ಣಿಗೆ ಗುರಿಯಾಗಿವೆ.
ಮೊದಲೇ ಸಾರಿಗೆ ನೌಕರರ ಮುಷ್ಕರದ ಬಿಸಿ ವ್ಯಾಪಾರಿಗಳ ಮೇಲೆ ಬಿದ್ದಿದೆ. ಜನರು ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರ ಮಧ್ಯೆ ಕೊರೊನಾ ನಿತ್ಯ ಉಲ್ಬಣಗೊಳ್ಳುತ್ತಿರುವುದರಿಂದ ಜನರು ಆತಂಕದಿಂದ ನಗರಕ್ಕೆ ಆಗಮಿಸುತ್ತಿಲ್ಲ. ಹೀಗಾಗಿ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ನೆಲಕಚ್ಚಿದೆ ಎನ್ನುತ್ತಾರೆ ವ್ಯಾಪಾರಸ್ಥರು.
ಕೊರೊನಾದಿಂದ ವ್ಯಾಪಾರದ ಮೇಲೆ, ಆರ್ಥಿಕ ವಹಿವಾಟಿನ ಮೇಲೆ ದುಷ್ಪರಿಣಾಮ ಬೀರಿದೆ. ಪರಿಣಾಮ ಬೆಲೆ ಹೆಚ್ಚಳ ಹಾಗೂ ಭಯದ ವಾತಾವರಣ ಜನರಲ್ಲಿ ಕಾಡುತ್ತಿದೆ. ಕಳೆದ ಬಾರಿ ಕೊರೊನಾ ಆರಂಭದಲ್ಲಿ ಬೀದಿಬದಿ ವ್ಯಾಪಾರ ಹಾಗೂ ಆಟೋ ಸಂಚಾರಕ್ಕೆ ಸರ್ಕಾರ ಬ್ರೇಕ್ ಹಾಕಿತ್ತು. ಆದ್ರೆ ಈಗ ಅದೆಲ್ಲಕ್ಕೂ ಕೊಂಚ ರಿಲೀಫ್ ನೀಡಲಾಗಿದೆ. ಆದರೆ ಜನರು ಮನೆಯಿಂದ ಹೊರ ಬರುತ್ತಿಲ್ಲ. ಹೀಗಾಗಿ ವ್ಯಾಪಾರವಿಲ್ಲದೆ ಸಣ್ಣಪುಟ್ಟ ವ್ಯಾಪಾರಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಶಿವಮೊಗ್ಗ ಕೇಂದ್ರ ಕಾರಾಗೃಹದ ಇಬ್ಬರು ವಿಚಾರಣಾಧೀನ ಕೈದಿಗಳಿಗೆ ಕೊರೊನಾ
ಬೀದಿಬದಿ ವ್ಯಾಪಾರಿಗಳು ದಿನದ ದುಡಿಮೆಯನ್ನೇ ನಂಬಿ ಜೀವನ ನಡೆಸುವವರು. ಮುಂಜಾನೆಯಿಂದ ರಾತ್ರಿವರೆಗೆ ಕಷ್ಟಪಟ್ಟು ದುಡಿದರೆ ಇವರ ಸಂಸಾರ ಸಾಗುತ್ತದೆ. ಆದರೆ, ಬೀದಿಬದಿ ವ್ಯಾಪಾರಕ್ಕೆ ಕೊರೊನಾ ಕಾರಣದಿಂದಾಗಿ ಬೀಗ ಬಿದ್ದರೆ ಇವರು ತೀವ್ರ ಸಂಕಷ್ಟಕ್ಕೊಳಗಾಗುವ ಆತಂಕ ಕಾಡುತ್ತಿದೆ.