ಹುಬ್ಬಳ್ಳಿ: ವಿಧವೆಗೆ ವಂಚಿಸಿದ್ದ ಆರೋಪಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅಶೋಕ ನಗರ ಠಾಣೆಯ ಪೊಲೀಸರಲ್ಲಿ ಆತಂಕ ಶುರುವಾಗಿದೆ.
ಡಿವೋರ್ಸ್ ಮ್ಯಾಟ್ರಿಮೋನಿ ಮೂಲಕ ಪರಿಚಯ ಮಾಡಿಕೊಂಡಿದ್ದ ಬೆಂಗಳೂರು ಮೂಲದ 33 ವರ್ಷದ ವ್ಯಕ್ತಿಯೊಬ್ಬ ವಂಚಿಸಿ ಪರಾರಿಯಾಗಿದ್ದ. ಈತನನ್ನು ಹಿಡಿದು ತಂದ ಅಶೋಕ ನಗರ ಠಾಣೆ ಪೊಲೀಸರಿಗೆ ಕೊರೊನಾ ಆತಂಕ ಶುರುವಾಗಿದೆ. ಡಿವೋರ್ಸ್ ಮ್ಯಾಟ್ರಿಮೋನಿಯಲ್ ಆ್ಯಪ್ ಮೂಲಕ ಅಶೋಕ ನಗರದ ವಿಧವೆಯೊಬ್ಬರನ್ನ ಪರಿಚಯ ಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದ. ನಂತರ ವೈಯಕ್ತಿಕ ಸಮಸ್ಯೆ ನೆಪದಲ್ಲಿ 76 ಸಾವಿರ ರೂಪಾಯಿ ನಗದು, 30 ಗ್ರಾಂ ಚಿನ್ನ, 1 ಮೊಬೈಲ್ ಪಡೆದು ವಂಚಿಸಿದ್ದ. ಈ ಕುರಿತು ಮಹಿಳೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದರು. ಆ ಬಳಿಕ ಈತನ ಆರೋಗ್ಯ ತಪಾಸಣೆ ನಡೆಸಿದಾಗ ಸೋಂಕು ದೃಡಪಟ್ಟಿದೆ. ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಇನ್ಸ್‌ಫೆಕ್ಟರ್ ಸೇರಿ 17 ಮಂದಿ ಕ್ವಾರಂಟೈನ್ ಮಾಡಲಾಗಿದ್ದು, ಇದರಿಂದ ಅಶೋಕ ನಗರ ಪೊಲೀಸ್ ಠಾಣೆ ಸಿಬ್ಬಂದಿಯಲ್ಲಿ ಆತಂಕ ಶುರುವಾಗಿದೆ.