ಹುಬ್ಬಳ್ಳಿ: ಈ ವರ್ಷ ಹಬ್ಬ, ಹರಿದಿನಗಳ ಮೇಲೂ ಕೊರೊನಾ ಕರಿಛಾಯೆ ಆವರಿಸಿದೆ. ಕೋವಿಡ್ ಹೊಡೆತದಿಂದಾಗಿ ಗಣೇಶ ಚತುರ್ಥಿ ಆಚರಣೆ ನೀರಸಗೊಂಡಿದೆ.
ಹುಬ್ಬಳ್ಳಿಯಲ್ಲಿ ವರ್ಷಂಪ್ರತಿ ಗಣಪತಿ ಹಬ್ಬ ಅದ್ಧೂರಿಯಾಗಿ ನಡೆಯುತ್ತಿತ್ತು. ಸಾರ್ವಜನಿಕವಾಗಿ ಮೂರ್ತಿ ಪ್ರತಿಷ್ಠಾಪಿಸುವ ಗಣೇಶ ಮಂಡಳಿಯವರು ಮುಂಚಿತವಾಗಿಯೇ ಅಲಂಕಾರದ ವಸ್ತುಗಳನ್ನು ಬುಕ್ ಮಾಡುತ್ತಿದ್ದರು. ಈ ವರ್ಷ ಸಾರ್ವಜನಿಕವಾಗಿ ಗಣಪನ ಪ್ರತಿಷ್ಠಾಪನೆಗೆ ನಿರ್ಬಂಧ ಹೇರಿರುವುದರಿಂದ ಈ ವಸ್ತುಗಳು ಖರೀದಿಯಾಗದೇ ಅಂಗಡಿ ಮಾಲೀಕರು ನಿರಾಶೆ ಅನುಭವಿಸುತ್ತಿದ್ದಾರೆ.
ರಾಜ್ಯ ಸರ್ಕಾರ ಕೇವಲ ದೇವಸ್ಥಾನಗಳಲ್ಲಿ ಮತ್ತು ಮನೆಯಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಸಂಪ್ರದಾಯದಂತೆ ಹಬ್ಬಾಚರಿಸಲು ಅನುಮತಿಸಿದೆ. ಆದರೆ ಜನರು ತಮ್ಮ ಮನೆಗಳಲ್ಲಿ ವಿಘ್ನೇಶ್ವರನನ್ನು ಅಲಂಕರಿಸಲು ವಸ್ತುಗಳ ಖರೀದಿಗೆ ಬರುತ್ತಿಲ್ಲ. ಅಂಗಡಿ ಮಾಲೀಕರು ಗಣಪತಿ ಹಬ್ಬಕ್ಕೆಂದು ಲಕ್ಷಾಂತರ ರೂ. ಬಂಡವಾಳ ಹಾಕಿ ಸಾಕಷ್ಟು ಅಲಂಕಾರಿಕ ವಸ್ತುಗಳನ್ನು ತಂದು ಮಾರಾಟಕ್ಕೆ ಇಟ್ಟಿದ್ದಾರೆ. ಆದ್ರೆ ಕೊರೊನಾ ಎಲ್ಲದ್ದಕ್ಕೂ ಕೊಕ್ಕೆ ಹಾಕಿದೆ.