ಧಾರವಾಡ: ಗರ್ಭಿಣಿಯ ಆರೋಗ್ಯ ತಪಾಸಣೆಯ ವೇಳೆ ಹೊಟ್ಟೆಯಲ್ಲಿರುವ ಶಿಶು ಅಂಗವೈಕಲ್ಯತೆ ಹೊಂದಿರುವುದನ್ನು ಪೋಷಕರ ಗಮನಕ್ಕೆ ತರದೆ ವೈದ್ಯಕೀಯ ನಿರ್ಲಕ್ಷ್ಯ ತೋರಿದ ವೈದ್ಯೆಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 11 ಲಕ್ಷದ 10 ಸಾವಿರ ರೂಪಾಯಿ ದಂಡ ಮತ್ತು ಪರಿಹಾರ ನೀಡುವಂತೆ ಆದೇಶಿಸಿದೆ.
ಧಾರವಾಡ ಶ್ರೀನಗರದ ಭಾವಿಕಟ್ಟಿ ನಿವಾಸಿ ಪರಶುರಾಮ ಘಾಟಗೆ ಎಂಬುವರು ಗರ್ಭಿಣಿಯಾಗಿದ್ದ ತಮ್ಮ ಪತ್ನಿ ಪ್ರೀತಿ ಅವರಿಗೆ 3ನೇ ತಿಂಗಳಿಂದ 9ನೇ ತಿಂಗಳಿನವರೆಗೆ ಧಾರವಾಡದ ಪ್ರಸೂತಿ ತಜ್ಞೆ ಡಾ. ಸೌಭಾಗ್ಯ ಕುಲಕರ್ಣಿ ಬಳಿ ತಪಾಸಣೆ ಮಾಡಿಸಿ ಚಿಕಿತ್ಸೆ ಕೊಡಿಸಿದ್ದರು. ವೈದ್ಯೆಯು 2018ರ ಜುಲೈ 12ರಿಂದ 2019ರ ಜನವರಿ 8ರ ತನಕ 5 ಬಾರಿ ಸ್ಕ್ಯಾನ್ ಮಾಡಿದ್ದರು. ಆದರೆ, ಗರ್ಭದಲ್ಲಿನ ಮಗುವಿನ ಬೆಳವಣಿಗೆ ಚೆನ್ನಾಗಿದೆ ಹಾಗೂ ಮಗು ಆರೋಗ್ಯವಾಗಿದೆ ಎಂದು ತಿಳಿಸಿದ್ದರು. ಬಳಿಕ, 9ನೇ ತಿಂಗಳಿನಲ್ಲಿ ಅದೇ ವೈದ್ಯರಲ್ಲಿಗೆ ತಪಾಸಣೆಗೆ ಹೋದಾಗ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಲು ಅವರು ಸಲಹೆ ನೀಡಿದ್ದರು. ಆದರೆ ಹಣಕಾಸಿನ ತೊಂದರೆಯಿಂದಾಗಿ ತನ್ನ ಪತ್ನಿಯ ಹೆರಿಗೆಯನ್ನು 2019ರ ಜ. 31ರಂದು ಧಾರವಾಡ ಎಸ್ಡಿಎಂ ಆಸ್ಪತ್ರೆಯಲ್ಲಿ ಮಾಡಿಸಲಾಗಿದೆ. ಆಗ ಹೆಣ್ಣು ಮಗು ಜನಿಸಿದೆ. ಮಗುವಿನ ಎರಡೂ ಕಾಲುಗಳು ಅಂಗವಿಕಲತೆಯಿಂದ ಕೂಡಿದ್ದವು ಎಂದು ಆರೋಪಿಸಿ ದೂರುದಾರರು ಆಯೋಗದ ಮೊರೆ ಹೋಗಿದ್ದರು.
ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳು ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನ್ ನಿಯಮಾವಳಿಯಂತೆ ಗರ್ಭಧಾರಣೆಯ 18ರಿಂದ 20 ವಾರಗಳ ಸ್ಕ್ಯಾನಿಂಗ್‍ನಲ್ಲಿ ಮಗುವಿನ ಆರೋಗ್ಯ, ಅದರ ಅಂಗಾಂಗಗಳ ಬಗ್ಗೆ ವೈದ್ಯರಿಗೆ ಮಾಹಿತಿ ಸಿಗುತ್ತದೆ. ಆದರೆ, 20 ವಾರಗಳಿಂದ 36 ವಾರಗಳ ನಡುವೆ ತನ್ನ ಪತ್ನಿಗೆ ಸ್ಕ್ಯಾನಿಂಗ್ ಮಾಡಿದರೂ, ವೈದ್ಯರು ಮಗುವಿನ ಅಂಗವಿಕಲತೆ ಬಗ್ಗೆ ಗೊತ್ತಿದ್ದರೂ ಆ ವಿಚಾರ ತಿಳಿಸಿರಲಿಲ್ಲ. ವೈದ್ಯಕೀಯ ನಿರ್ಲಕ್ಷ್ಯ ತೋರಿ ತಮಗೆ ಸೇವಾ ನ್ಯೂನತೆ ಎಸಗಿದ್ದಾರೆ ಎಂದು ಆರೋಪಿಸಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರರು ಆಯೋಗವನ್ನು ಒತ್ತಾಯಿಸಿದ್ದರು.
ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ವಿಚಾರಣೆ: ದೂರಿನ ಬಗ್ಗೆ ಕೂಲಂಕಷ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು, ವೈದ್ಯರು ಕಾಲಕಾಲಕ್ಕೆ ದೂರುದಾರರ ಪತ್ನಿಯ ಸ್ಕ್ಯಾನಿಂಗ್ ತೆಗೆದು ತಪಾಸಣೆ ಮಾಡಿದಾಗ ಅವರಿಗೆ ಗರ್ಭದಲ್ಲಿರುವ ಶಿಶುವಿನ ಅಂಗವಿಕಲತೆ ಗೊತ್ತಾಗುತ್ತದೆ. ಎಮ್ಟಿಪಿ ಕಾಯ್ದೆ ಪ್ರಕಾರ 20 ವಾರಗಳ ಗರ್ಭದ ಸಮಯದಲ್ಲಿ ಶಿಶುವಿನ ಅಂಗವಿಕಲತೆಯ ಬಗ್ಗೆ ವೈದ್ಯರಿಗೆ ತಿಳಿದಿದೆ. ಆ ಸಂಗತಿಯನ್ನು ಅವರು ದೂರುದಾರರ ಗಮನಕ್ಕೆ ತಂದಿದ್ದರೆ ಅವರು ಕಾನೂನಿನ ಪ್ರಕಾರ ಅಂಗವಿಕಲ ಮಗುವನ್ನು ಗರ್ಭದಲ್ಲಿ ಉಳಿಸಿಕೊಳ್ಳಬೇಕೋ ಅಥವಾ ಬೇಡವೋ ಎನ್ನುವ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಿದ್ದರು. ಆದರೆ ಶಿಶುವಿನ ಅಂಗವಿಕಲತೆಯ ಮಹತ್ವದ ಸಂಗತಿಯನ್ನು ತಜ್ಞ ವೈದ್ಯರಾದ ಎದುರುದಾರರು ದೂರುದಾರರಿಗೆ ತಿಳಿಸದೆ, ವೈದ್ಯಕೀಯ ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಆಯೋಗ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ತಿಂಗಳೊಳಗೆ ಪರಿಹಾರ ನೀಡದಿದ್ದರೆ ಶೇ.8ರಂತೆ ಬಡ್ಡಿ: ವೈದ್ಯರ ಈ ನಡವಳಿಕೆಯು ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನತೆ ಆಗುತ್ತದೆ ಎಂಬ ಸರ್ವೋಚ್ಛ ನ್ಯಾಯಾಲಯ ಮತ್ತು ರಾಷ್ಟ್ರೀಯ ಗ್ರಾಹಕರ ಆಯೋಗದ ತೀರ್ಪುಗಳನ್ನು ಆಧರಿಸಿ ಜಿಲ್ಲಾ ಗ್ರಾಹಕರ ಆಯೋಗವು ಈ ತೀರ್ಪು ನೀಡಿದೆ. ಮಗುವಿನ ಈವರೆಗಿನ ವೈದ್ಯಕೀಯ ಖರ್ಚಿಗೆ 50,000 ರೂ., ದೂರುದಾರರ ಓಡಾಟ ಮತ್ತು ಖರ್ಚು ವೆಚ್ಚಕ್ಕೆ 50,000 ರೂ., ಮಗುವಿನ ಪಾಲಕರಿಗೆ ಆಗಿರುವ ಮಾನಸಿಕ ನೋವು ಮತ್ತು ಹಿಂಸೆಗಾಗಿ 2,00,000 ರೂ., ಮಗುವಿನ ಭವಿಷ್ಯದ ವೈದ್ಯಕೀಯ ಖರ್ಚು ವೆಚ್ಚಕ್ಕಾಗಿ 3,00,000 ರೂ. ಹಾಗೂ ಮಗುವಿನ ಭವಿಷ್ಯದ ಜೀವನ ನಿರ್ವಹಣೆಗೆ 5,00,000 ರೂ. ಮತ್ತು ಈ ಪ್ರಕರಣದ ಖರ್ಚು ವೆಚ್ಚವಾಗಿ 10,000 ರೂ. ಸೇರಿದಂತೆ, ಒಟ್ಟೂ 11,10,000 ರೂ. ಪರಿಹಾರ ನೀಡುವಂತೆ ಆದೇಶಿಸಿದೆ. ಅಲ್ಲದೆ, ಈ ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ದೂರುದಾರರಿಗೆ ಪರಿಹಾರ ನೀಡುವಲ್ಲಿ ತಪ್ಪಿದರೆ, ಆ ಮೊತ್ತದ ಮೇಲೆ ಶೇಕಡಾ 8ರಂತೆ ಬಡ್ಡಿ ನೀಡುವಂತೆ ವೈದ್ಯರಿಗೆ ಆಯೋಗ ತಿಳಿಸಿದೆ.
ಜೊತೆಗೆ, 11,10,000 ರೂ. ಪರಿಹಾರದಲ್ಲಿ 8,00,000 ರೂ. ಹಣವನ್ನು ಮಗುವಿನ ಹೆಸರಿನಲ್ಲಿ ಅವಳು ವಯಸ್ಕಳಾಗುವವರೆಗೆ ದೂರುದಾರರು ಇಚ್ಛಿಸುವ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಖಾಯಂ ಠೇವಣಿ ಇಡಬೇಕು. ಹಾಗೂ ಪರಿಹಾರದ ಪೂರ್ಣ ಹಣವನ್ನು ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಖರ್ಚು ಮಾಡುವಂತೆ ಆಯೋಗ ತಿಳಿಸಿದೆ.
ಇದನ್ನೂ ಓದಿ: ಸೇವಾ ನ್ಯೂನತೆ: ಸ್ಪೈಸ್‍ಜೆಟ್‌ಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ದಂಡ