ಹುಬ್ಬಳ್ಳಿ : ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಚುನಾವಣೆಯಲ್ಲಿ ಸೋಲುವ ಬೀತಿಯಿಂದಾಗಿ ಕಾಂಗ್ರೆಸ್ ನವರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ನರಕದಲ್ಲೂ ಜಾಗವಿಲ್ಲ ಎಂದು ಟೀಕಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಮೊದಲು ತಮ್ಮ ಪಕ್ಷದ ಆಂತರಿಕ ಕಲಹವನ್ನುಪರಿಹರಿಸುವ ಕೆಲಸ ಮಾಡಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ತಿರುಗೇಟು ನೀಡಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ನವರ ಕಿವಿಗೆ ಹೂವು ಇಟ್ಟಿದ್ದಾರೆ. ಈ ಚುನಾವಣೆಯಲ್ಲಿ ಸೋಲುವ ಭಯದಿಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು ಸಾಕ್ಷ್ಯಾಧಾರಗಳಿಲ್ಲದೆ 40 ಪರ್ಸೆಂಟ್ ಸರ್ಕಾರ ಎಂದು ಆರೋಪಿಸುತ್ತಿದ್ದಾರೆ. ಸಾಕ್ಷಿಗಳಿದ್ದಲ್ಲಿ ಲೋಕಾಯುಕ್ತಗೆ ದೂರು ನೀಡಿ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಕರ್ನಾಟಕ ಗುತ್ತಿಗೆದಾರ ಸಂಘದ ಆಧ್ಯಕ್ಷ ಕೆಂಪಣ್ಣ ಅವರನ್ನು ಬಲಿಪಶು ಮಾಡಿದ್ದಾರೆ. ಕೆಂಪಣ್ಣ ಅವರು ದೂರು ನೀಡಿದ ನಂತರವು ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ ಮೇಲೆ ಒಂದು ದಿನ ಜೈಲು ವಾಸ ಅನುಭವಿಸಿದರು ಎಂದು ಹೇಳಿದರು.
ಹಿಂದೂಗಳ ಹತ್ಯೆ ಕುರಿತು ಸುರ್ಜೇವಾಲ ಯಾಕೆ ಮಾತನಾಡುತ್ತಿಲ್ಲ..?, ಭಾರತೀಯ ಜನತಾ ಪಾರ್ಟಿ ಅಭಿವೃದ್ಧಿ ದಿಕ್ಕಿನಲ್ಲಿ ಚಲಿಸುತ್ತಿರುವುದನ್ನು ಸಹಿಸಿಕೊಳ್ಳದೆ ಅನೇಕ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಕಾಂಗ್ರೆಸ್ನವರಿಗೆ ಮುಂಬರುವ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಕುಟುಕಿದರು.
ರಾಜ್ಯಕ್ಕೆ ಅತ್ಯುತ್ತಮ ಬಜೆಟ್ ನೀಡಿದ್ದಾರೆ: ಕೇಂದ್ರ ಹಾಗೂ ರಾಜ್ಯದ ಎರಡು ಬಜೆಟ್ಗಳು ಜನಪರವಾಗಿ ಅಭಿವೃದ್ಧಿಗೆ ಒತ್ತು ನೀಡಿವೆ. ಆದರೆ ಸರ್ಕಾರದ ವಿರುದ್ಧ ಟೀಕಿಸುವ ವಿರೋಧ ಪಕ್ಷಗಳು ಅಭಿವೃದ್ಧಿ ವಿಷಯದ ಬಗ್ಗೆ ಚರ್ಚೆ ಮಾಡದೇ ಪಲಾಯನ ಮಾಡುತ್ತಿವೆ ಎಂದರು. ಮುಖ್ಯಮಂತ್ರಿಗಳು ಮಂಡಿಸಿರುವ ಬಜೆಟ್ ಸರ್ವಸ್ಪರ್ಶಿಯಾಗಿದೆ. ರಾಜ್ಯಕ್ಕೆ ಅತ್ಯುತ್ತಮ ಬಜೆಟ್ ನೀಡಿದ್ದಾರೆ. ಕೃಷಿ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಮುನ್ನೋಟವಿಟ್ಟುಕೊಂಡು ವಿವಿಧ ಯೋಜನೆ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ, ರೈತ ಉತ್ಪನ್ನ ಯೋಜನೆ, ಮಹಿಳಾ ಸಬಲೀಕರಣಕ್ಕೆ ಸ್ತ್ರೀಶಕ್ತಿ ಯೋಜನೆ ಘೋಷಣೆ ಮಾಡುವ ಜೊತೆಗೆ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಿದ್ದು ಸ್ವಾಗತಾರ್ಹ ಎಂದರು.
ಆಂತರಿಕ ಸಮೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ: ಕಾಂಗ್ರೆಸ್ ನವರಿಗೆ ಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಎಲ್ಲ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಗಳಿಲ್ಲ. ಹಾಗಾಗಿ ಅವರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿಲ್ಲ. ಬಿಜೆಪಿಯಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದು, ಆಂತರಿಕ ಸಮೀಕ್ಷೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಎಲ್ಲ ಜಿಲ್ಲಾ ಕೋರ್ ಕಮಿಟಿ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ಮಹೇಶ್ ಟೆಂಗಿನಕಾಯಿ ಇದೇ ಸಂದರ್ಭದಲ್ಲಿ ಹೇಳಿದರು. ಮಾಧ್ಯಮಗೋಷ್ಟಿಯಲ್ಲಿ ದತ್ತಮೂರ್ತಿ ಕುಲಕರ್ಣಿ, ರವಿ ನಾಯಕ ಉಪಸ್ಥಿತರಿದ್ದರು.
ಇದನ್ನೂ ಓದಿ: ಚಿಕ್ಕಮಗಳೂರು ಜನ ಭಾವನಾತ್ಮಕ ವಿಚಾರ ಬಿಟ್ಟು, ಜೀವನದ ಬಗ್ಗೆ ಯೋಚಿಸುತ್ತಿದ್ದಾರೆ: ಡಿ ಕೆ ಶಿವಕುಮಾರ್