ಹುಬ್ಬಳ್ಳಿ : ಸನಾತನ ಧರ್ಮದ ಬಗ್ಗೆ ತಮಿಳುನಾಡು ಮಂತ್ರಿ ಉದಯನಿಧಿ ಸ್ಟಾಲಿನ್ ಅವಹೇಳನಕಾರಿ ಮಾತಾಡಿದ್ದಾರೆ. ಅಚಾನಕ್ಕಾಗಿ ಅವರು ಹೇಳಿಕೆ ಕೊಟ್ಟಿಲ್ಲ. ಸನಾತನ ಧರ್ಮದ ವಿರುದ್ಧವಾಗಿಯೇ ಅಲ್ಲಿ ಕಾನ್ಫರೆನ್ಸ್ ಮಾಡಲಾಗಿತ್ತು. ಈ ಹೇಳಿಕೆ ಖಂಡಿಸಲು ಕಾಂಗ್ರೆಸ್ ನಾಯಕರಿಂದ ಸಾಧ್ಯವಾಗಿಲ್ಲ. ಘಮಂಡಿಯಾ ಘಟಬಂಧನ ಉಳಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಹಿಂದೆ ಕೂಡ ಸಚಿವ ಸತೀಶ್ ಜಾರಕಿಹೊಳಿ ಹಿಂದೂ ಎಂಬ ಪದ ಅಶ್ಲೀಲ ಎಂದು ಹೇಳಿದ್ದರು. ಬಿಹಾರದ ಶಿಕ್ಷಣ ಸಚಿವರು ರಾಮಚರಿತಮಾನಸ ಕೀಳಾಗಿ ಹೀಯಾಳಿಸಿದ್ದರು. ಎಐಸಿಸಿ ನಾಯಕ ರಾಹುಲ್ ಗಾಂಧಿ ಅಮೆರಿಕದಲ್ಲಿ ಹೋಗಿ ಮುಸ್ಲಿಂ ಲೀಗ್ ಸೆಕ್ಯುಲರ್ ಪಾರ್ಟಿ ಎಂದಿದ್ದರು.
ಇದೇ ಮುಸ್ಲಿಂ ಲೀಗ್‌ನಿಂದ ದೇಶ ವಿಭಜನೆಯಾಗಿದೆ. ಅಲ್ಲದೇ, ಈ ಲೀಗ್ನ ಡೈರೆಕ್ಟ್ ಆಕ್ಟ್ನಿಂದ 1946 ಜನವರಿ ತಿಂಗಳಲ್ಲಿ ಕಲ್ಕತ್ತದಲ್ಲಿ 1500ಕ್ಕೂ ಹೆಚ್ಚು ಹಿಂದೂಗಳ ನರಮೇಧವಾಗಿದೆ. ಇವತ್ತಿಗೂ ಚುನಾವಣೆ ಹತ್ತಿರ ಬಂದಾಗ ಪಾರ್ಟ್ ಟೈಮ್ ಹಿಂದೂ ರೀತಿಯಲ್ಲಿ ವರ್ತಿಸುವ ಕಾಂಗ್ರೆಸ್ ಈ ಹೇಳಿಕೆ ಖಂಡಿಸಿಲು ತಯಾರಿಲ್ಲ. ಘಮಂಡಿಯಾ ಘಟಬಂಧನ ಉಳಿಸಿಕೊಳ್ಳುವ ಆತುರದಲ್ಲಿ ಹೇಳಿಕೆಯನ್ನು ಖಂಡಿಸಿಲ್ಲ. ಸುತ್ತು ಬಳಸಿ ಎಲ್ಲ ಸರ್ವಧರ್ಮ ನಂಬುತ್ತೇವೆ ಅಂತಾರೆ. ಈ ಬಗ್ಗೆ ರಾಹುಲ್ ಗಾಂಧಿಯವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಜೋಶಿ ವಾಗ್ದಾಳಿ ನಡೆಸಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ದೇವಸ್ಥಾನಕ್ಕೆ ಹೋಗುತ್ತಾರೆ ಅವರ ನಿಲುವೇನು..? ಡಿಎಂಕೆ ಹೇಳಿಕೆ ಖಂಡಿಸಲು ನಿಮಗೆ ಶಕ್ತಿಯಿಲ್ಲ. ದೇಶದ ಸಂಸ್ಕೃತಿ, ನಂಬಿಕೆ, ಸಮಗ್ರತೆ ಏನಾದರೂ ಆಗಲಿ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ತುಷ್ಟೀಕರಣದ ರಾಜಕೀಯದ ಹಾದಿ ತಲುಪಿದೆ. ಕಾಂಗ್ರೆಸ್ ಪಕ್ಷ ಇದರ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಪ್ರಹ್ಲಾದ್ ಜೋಶಿ ಒತ್ತಾಯಿಸಿದರು.
ಅಧಿವೇಶನ ಕರೆಯುವ ಮೊದಲು ವಿಪಕ್ಷಗಳನ್ನು ಕೇಳುವ ಪದ್ಧತಿ ಇಲ್ಲ : ಸಂಸತ್ ಅಧಿವೇಶನದ ಬಗ್ಗೆ ಅನಗತ್ಯ ಪುಕಾರು ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಅಧಿವೇಶನ ಕರೆಯುವ ಸ್ವತಂತ್ರವಿದೆ. ಸಂವಿಧಾನದ 85ನೆ ವಿಧಿ ಪ್ರಕಾರ ರಾಷ್ಟ್ರಪತಿಗಳಿಗೆ ಮನವಿ ಮಾಡಿ, ಅಧಿವೇಶನ ಕರೆದಿದ್ದೇವೆ. 92 ಬಾರಿ ದೇಶದ ಚುನಾಯಿತ ಪಕ್ಷಗಳನ್ನು ಕಾಂಗ್ರೆಸ್ ಕಿತ್ತೊಗೆದಿದೆ. ಈಗ ಕಾಂಗ್ರೆಸ್ ನಮಗೆ ಪ್ರಜಾಪ್ರಭುತ್ವದ ಪಾಠ ಮಾಡುತ್ತಿದೆ. ಅಧಿವೇಶನ ಕರೆಯುವ ಮೊದಲು ವಿಪಕ್ಷಗಳನ್ನು ಕೇಳುವ ಪದ್ಧತಿ ಇಲ್ಲ. ಸೂಕ್ತವಾದ ಸಮಯದಲ್ಲಿ ಅಧಿವೇಶನದ ಅಜೆಂಡಾ ತಿಳಿಯಲಿದೆ. ಸಂಸತ್ ಅಧಿವೇಶನ ಲೈವ್ ಆಗಿ ತೋರಿಸಲು ಶುರು ಮಾಡಿದ್ದು ನಾವೇ ಎಂದರು.
ನಟ ಪ್ರಕಾಶ ರಾಜ್ ಅತೃಪ್ತ ಆತ್ಮಗಳು, ಅವರು ಸುದ್ದಿಯಲ್ಲಿ ಇರಲು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಗೃಹ ಸಚಿವರನ್ನು ನಾವು ಜಂಟಲ್'ಮನ್ ಎಂದು ತಿಳಿದಿದ್ದೆವು. ಆದರೆ, ಜಿ.ಪರಮೇಶ್ವರ ಕೂಡಾ ಮತಬ್ಯಾಂಕ್ ರಾಜಕೀಯಕ್ಕೆ ಏನೇನೂ ಮಾತನಾಡುತ್ತಿದ್ದಾರೆ. ಹಿಂದೂ, ಸನಾತನ ಧರ್ಮ ಅನ್ನೋದ ನಿತ್ಯ ನೂತನ, ಚಿರಪುರಾತನ, ಸನಾತನ ಸಂಸ್ಕೃತಿ ಬಹಳ ಪುರಾತನವಾಗಿದೆ ಎನ್ನೋದು ಮೊದಲು ತಿಳಿದುಕೊಳ್ಳಲಿ ಎಂದು ಜೋಶಿ ಹರಿಹಾಯ್ದರು.
ಕಾವೇರಿ ವಿಚಾರ : ಕಾವೇರಿ ನೀರು ತಮಿಳುನಾಡಿಗೆ ಬಿಟ್ಟ ವಿಚಾರವಾಗಿ ಮಾತನಾಡಿ, ಘಮಂಡಿಯಾ ಘಟಬಂಧನ ಉಳಿಸಲು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ರಾಜ್ಯದ ಹಿತಾಸಕ್ತಿ ಬಲಿಕೊಟ್ಟು ಈಗ ಕೋರ್ಟ್‌ಗೆ ಹೋಗಿದ್ದಾರೆ. ಪ್ರಧಾನಿ ಮೋದಿಯವರನ್ನು ಸೋಲಿಸುವ ಷಡ್ಯಂತ್ರ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜನರು ಮೋದಿಯವರನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾರತ್ ಹೆಸರಿನ ಕುರಿತು ಕೇಂದ್ರ ಸರ್ಕಾರದ ವಕ್ತಾರರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಭಾರತ ಎನ್ನುವವರು ಭಾರತ ಅನ್ನಲಿ, ಇಂಡಿಯಾ ಅನ್ನೋರು ಇಂಡಿಯಾ ಅನ್ನಲಿ ಎಂದರು.
ಈದ್ಗಾ ಮೈದಾನ : ಹುಬ್ಬಳ್ಳಿ ಈದ್ಗಾ ಮೈದಾನ ಯಾವುದೇ ಒಂದು ಸಮುದಾಯಕ್ಕೆ ಸೇರಿದ್ದಲ್ಲ. ಮೈದಾನ ಪಾಲಿಕೆಯ ಆಸ್ತಿ, ಗಣೇಶ ಮೂರ್ತಿ ಇಡಲು ಪಾಲಿಕೆ ಅನುಮತಿ ಬೇಕು. ಕಳೆದ ವರ್ಷ ಕೋರ್ಟ್ ಆದೇಶದಂತೆ ಅನುಮತಿ ನೀಡಲಾಗಿದೆ ಎಂದರು. ಬಿಜೆಪಿ ಕಾರ್ಯಕರ್ತರ ಮೇಲೆ ಕೇಸ್ ಹಾಕುತ್ತಿರುವ ವಿಚಾರ. ಸರ್ಕಾರ ಯಾವುದೂ ಪರ್ಮನೆಂಟ್ ಅಲ್ಲ. ಪೊಲೀಸರು ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಿಲ್ಲಿಸಬೇಕು. ರಾಜಕಾರಣಿಗಳ ಮಾತು ಕೇಳಿ ಕೇಸ್ ಹಾಕಬಾರದು. ಬಿಜೆಪಿ ಹೋರಾಟದಿಂದಲೇ ಮೇಲೆ ಬಂದ ಪಕ್ಷ. ಪೊಲೀಸರ ವಿರುದ್ಧ ಹೋರಾಟ ಮಾಡಬೇಕಾಗುತ್ತೆ ಎಂದು ಜೋಶಿ ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ನಾನು ಮಾತನಾಡಿಲ್ಲ: ಸಚಿವ ಡಾ.ಜಿ.ಪರಮೇಶ್ವರ್