ಹುಬ್ಬಳ್ಳಿ: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ನಗರದ ಹೊರವಲಯದ ತಾರಿಹಾಳ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ ತಡೆದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಭೂ ಸುಧಾರಣಾ ಕಾಯ್ದೆ ರೈತರ, ಕೃಷಿ ಕಾರ್ಮಿಕರಿಗೆ ಮರಣ ಶಾಸನವಾಗಿದೆ. ವ್ಯವಸಾಯ ಮಾಡಲು ಆಸಕ್ತರಿಗೆ ಭೂಮಿ ಖರೀದಿ ಮಾಡಲು ಅನುಕೂಲವಾಗುವಂತೆ ತಿದ್ದುಪಡಿ ತರಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ ಭೂ ಸುಧಾರಣೆ ಕಲಂ 79 ಎ.ಬಿ.ಸಿ ಹಾಗೂ, 80ಕ್ಕೆ ಇದ್ದ ಅಧಿಕಾರ ಕಡಿತ ಮಾಡಿ 63 ಕಲಂಗೆ ನೀಡಲಾಗಿದೆ.
ಈ ಕಾಯ್ದೆ ಕಾರ್ಪೋರೇಟ್ ಕಂಪನಿಗಳಿಗೆ, ಬಂಡವಾಳಶಾಹಿಗಳು, ಅಕ್ರಮವಾಗಿ ಹಣ ಗಳಿಸಿದವರಿಗೆ ಅನುಕೂಲವಾಗುತ್ತದೆ. ಬೃಹತ್ ಕಂಪನಿಗಳ ಹಿತಾಸಕ್ತಿಗೆ ಮಣಿದು ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿರುವುದು ಖಂಡನೀಯ ಎಂದರು.