ಧಾರವಾಡ: ಅಂಗಡಿ ಇಡುವ ವಿಚಾರವಾಗಿ ಇಬ್ಬರ ನಡುವೆ ಜಗಳ ಆಗಿದ್ದು, ಈ ವೇಳೆ ನಾಗಪ್ಪ ಗಾಣಿಗೇರ ಎಂಬುವವ ಪಿಸ್ತೂಲ್ ತೋರಿಸಿ ಧಮಕಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗರಗ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ನಾಗಪ್ಪ ಎಂಬ ಬಿಜೆಪಿ ಮುಖಂಡನಿಂದ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಲಾಗಿದೆ. ಧಾರವಾಡ ತಾಲೂಕಿನ ಹೊಸ ತೆಗೂರ ಗ್ರಾಮದಲ್ಲಿ ನಡೆದಿತ್ತು. ಜೀವ ಬೆದರಿಕೆ ಹಾಕಿದ್ದಲ್ಲದೇ ಪಿಸ್ತೂಲ್ನಿಂದ ಹೊಡೆಯಲು ಯತ್ನಿಸಿದ್ದ ಅರೋಪದ ಹಿನ್ನೆಲೆ ಆರ್ಮ್ಸ್ ಕಾಯ್ದೆಯಡಿ ಪಿಸ್ತೂಲ್ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.
ಆತನ ವೆಪನ್ ಲೈಸೆನ್ಸ್ ರದ್ದು ಮಾಡ್ತೇವೆ, ಆರೋಪಿಯ ಮೇಲೆ ಈ ಹಿಂದೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ. ಪ್ರಕರಣದ ತನಿಖೆ ಮಾಡಿ ಬಂಧನ ಮಾಡುವುದಾದರೆ ಮಾಡ್ತೇವೆ, ಈಗಾಗಲೇ ಪಿಸ್ತೂಲ್ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದೇವೆ ಎಂದು ವಿವರಿಸಿದರು.
ಜೀಪ್ ಎಗರಿಸಿದ್ದ ಪ್ರಕರಣ: ಅಣ್ಣಿಗೇರಿ ಪೊಲೀಸ್ ಠಾಣೆ ಜೀಪ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಣ್ಣಿಗೇರಿ ಪಟ್ಟಣದ ಪೊಲೀಸ್ ಠಾಣೆಯ ಸರ್ಕಾರಿ ಪೊಲೀಸ್ ಜೀಪನ್ನೇ ವ್ಯಕ್ತಿಯೋರ್ವ ಎಗರಿಸಿ ಪರಾರಿಯಾಗಿದ್ದ. ಈತ ಪ್ರತಿನಿತ್ಯ ಠಾಣೆಗೆ ಬಂದು ವಾಹನ ಕ್ಲೀನ್ ಮಾಡಿ ಕೊಡ್ತಿದ್ದ. ನಿನ್ನೆ ಪೊಲೀಸರು ನೈಟ್ ರೌಂಡ್ ಮುಗಿಸಿಕೊಂಡು ವಾಹನವನ್ನು ಠಾಣೆಗೆ ತಂದು ನಿಲ್ಲಿಸಿದ್ದರು. ಆಗ ಸಮಯ ನೋಡಿ ನಾಗಪ್ಪ ಆ ವಾಹನವನ್ನು ಎಗರಿಸಿಕೊಂಡು ಹೈವೇಗೆ ಹೋಗಿ ವಾಹನಗಳ ತಪಾಸಣೆ ಮಾಡಿದ್ದಾನೆ. ವಾಹನಗಳು ಹೈವೇಯಲ್ಲಿ ಯಾವ ರೀತಿ ಹೋಗಬೇಕು ಎಂದು ಪೊಲೀಸರಂತೆ ಕರ್ತವ್ಯ ನಿರ್ವಹಿಸಿದ್ದಾನೆ ಎಂದು ವಿವರಿಸಿದರು. ಈ ಸಂಬಂಧ ಠಾಣಾಧಿಕಾರಿಗೆ ಕಾರಣ ಕೇಳಿ ನೋಟಿಸ್ ಕೂಡ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.