ಹುಬ್ಬಳ್ಳಿ: ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳು ಕಾರ್ಯಾಚರಣೆ ನಡೆಸುತ್ತಿದ್ದು, ಸಾಕಷ್ಟು ಸರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಅಸುರಕ್ಷಿತ ಪ್ರಯಾಣದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಸರ್ಕಾರ ನಡೆಸುವುದು ನಮಗೆ ಗೊತ್ತಿದೆ. ನೀವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಪ್ರಯಾಣಿಕರ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಗರಂ ಆದರು.
ನಾನು ಇವತ್ತು ಬೆಂಗಳೂರಿಗೆ ಹೋಗುತ್ತಿದ್ದೇನೆ. ಸಾರಿಗೆ ನೌಕರರ ಮುಷ್ಕರ ವಿಚಾರವಾಗಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಖಾಸಗಿ ವಾಹನಗಳ ದುಪ್ಪಟ್ಟು ಹಣ ವಸೂಲಿ ಮಾಡುತ್ತಿಲ್ಲ. ನಾವು ನಿಗದಿ ಮಾಡಿದ ಹಣ ಮಾತ್ರ ವಸೂಲಿ ಮಾಡುತ್ತಿದ್ದಾರೆ. ಒಂದು ವೇಳೆ ದುಪ್ಪಟ್ಟು ಹಣ ವಸೂಲಿ ಮಾಡಿದರೆ, ಕ್ರಮ ಜರುಗಿಸುತ್ತೇವೆ. ವಿಶೇಷವಾದ ಸಂದರ್ಭದಲ್ಲಿ ಖಾಸಗಿ ವಾಹನ ಓಡಿಸಲಾಗುತ್ತಿದೆ. ಪ್ರಯಾಣಿಕರು ಯಾವುದೇ ಆತಂಕ ಪಡುವುದು ಬೇಡ ಎಂದರು.
ಓದಿ: ಹಠ ಹಿಡಿದರೆ ಬಿಗಿ ಕ್ರಮ: ಸಾರಿಗೆ ನೌಕರರಿಗೆ ಸಿಎಂ ಎಚ್ಚರಿಕೆ
ಬೆಳಗಾವಿ ಲೋಕಸಭೆ ಉಪಚುನಾವಣೆ ಕುರಿತು ಪ್ರತಿಕ್ರಿಯಿಸಿ, ಎರಡು ದಿನಗಳ ಕಾಲ ಬೆಳಗಾವಿಯಲ್ಲಿದ್ದೆ. ಅಲ್ಲಿರುವ ಎಲ್ಲಾ ವಾತಾವರಣ ಕೂಡ ನಮ್ಮ ಪರವಾಗಿದೆ. ಮಾಜಿ ಸಚಿವ ದಿ.ಸುರೇಶ್ ಅಂಗಡಿಯವರು ಗೆದ್ದ ಅಂತರದಲ್ಲಿಯೇ ಅಂಗಡಿಯವರ ಶ್ರೀಮತಿ ಮಂಗಳಾ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.