ಧಾರವಾಡ: ಕಲಘಟಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ ಛಬ್ಬಿ ಪರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತಯಾಚನೆ ಮಾಡಿದರು. ಧಾರವಾಡ ತಾಲೂಕಿನ ಮುಗದ ಗ್ರಾಮದಲ್ಲಿ ಭರ್ಜರಿ ರೋಡ್ ಶೋ ಮೂಲಕ ಬೊಮ್ಮಾಯಿ ಮತಬೇಟೆ ನಡೆಸಿದರು. ಮುಗದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ರೋಡ್ ಶೋದಲ್ಲಿ ಮೋದಿ ಮೋದಿ ಎಂಬ ಘೋಷಣೆ ಕೇಳಿಬಂದವು. ರಸ್ತೆಯುದ್ದಕ್ಕೂ ಹೂಮಳೆಗರೆಯಲಾಯಿತು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ನಿಮ್ಮ ಸ್ವಾಗತಕ್ಕೆ ನಾನು ಚಿರರುಣಿಯಾಗಿದ್ದೇನೆ. ಮೇ 13 ಕ್ಕೆ ನಮ್ಮ ವಿಜಯೋತ್ಸವ ಪಕ್ಕಾ. ಮುಗದ ಗ್ರಾಮ ಹಾಗೂ ನನ್ನ ನಡುವಿನ ಸಂಬಂಧ ಬಹಳ ಹಳೆಯದು. ರಾಜಕೀಯವಾಗಿ ಈ ಗ್ರಾಮ ಪ್ರಜ್ಞಾವಂತರ ಗ್ರಾಮವಾಗಿದೆ. ಚುನಾವಣೆಯು ಅಂತಿಮ ಘಟ್ಟಕ್ಕೆ ತಪುಲಿದೆ. ಎಲ್ಲ ಕಡೆ ಜನರಲ್ಲಿ ಉತ್ಸಾಹ ಇದೆ. ವರುಣದಿಂದ ನಾನು ಈಗಷ್ಟೇ ಬಂದಿದ್ದೇನೆ, ಅಲ್ಲಿ ಕೂಡ ಅಪಾರ ಜನ ಸೇರಿದ್ದರು ಎಂದು ಸಂತಸ ವ್ಯಕ್ತಪಡಿಸಿದರು.
ಇದು ನೈಸರ್ಗಿಕ ಸಂಪತ್ತು ಇರುವ ಕ್ಷೇತ್ರ, ಗುಡ್ಡಗಾಡು ಪ್ರದೇಶ. ನಾಗರಾಜ್ ಈ ಕ್ಷೇತದ ಶಾಸಕ ಆಗಬೇಕಾದರೆ ಪುಣ್ಯ ಮಾಡಬೇಕು. ನಮ್ಮ ಅಭ್ಯರ್ಥಿ ಉಳಿಸುವ ಜವಾಬ್ದಾರಿ ನಿಮ್ಮದು. ಈ ಕ್ಷೇತ್ರ ಅಭಿವೃದ್ಧಿ ಆಗಲೇಬೇಕು, ಅದಕ್ಕೆ ಕಾಲ ಕೂಡಿಬಂದಿದೆ. ಕಳೆದ ಬಾರಿ ನಮ್ಮ ಶಾಸಕ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಎಲ್ಲ ಕಡೆ ಬೆಂಬಲ ಸಿಕ್ಕಿದೆ. ಈ ಹಿಂದಿನ ಕಾಂಗ್ರೆಸ್ ದುರಾಡಳಿತದ ಕರಿಛಾಯೆ ಮತ್ತೆ ಬೀಳಬಾರದು. ಸಮಾಜ ಒಡೆಯುವ ಕೆಲಸ ಆಗಬಾರದು. ಕೊಲೆ, ಸುಲಿಗೆ ವಿರೋಧ ಪಕ್ಷದವರ ಕಗ್ಗೊಲೆ ವ್ಯಾಪಕ ಇತ್ತು. ಅತೀ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಕಾಂಗ್ರೆಸ್ ಸರ್ಕಾರದಲ್ಲಿ ಎಂದು ಸಿಎಂ ಆರೋಪಿಸಿದರು.
ಕಾಂಗ್ರೆಸ್ 10 ಕೆಜಿ ಅಕ್ಕಿ ಕೊಡಲಾಗುವುದು ಅಂತಾರೆ. 2013 ರಲ್ಲಿ 10 ಕೆಜಿಯನ್ನೇ ಕೊಡಲಾಗುತ್ತಿತ್ತು. ನಂತರ 5 ಕೆಜಿ ಕೊಟ್ಟರು. ಇದೀಗ ಚುನಾವಣೆ ಬಂದಾಗ ಮತ್ತೆ 10 ಕೆಜಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಎಂದರೆ ಸುಳ್ಳು ಎಂದರ್ಥ, ಮೇ 10ರವರೆಗೆ ಗ್ಯಾರಂಟಿ ನಂತರ ಗಳಗಂಟಿ. ಇದರಿಂದ ಜನ ಬೇಸತ್ತು ಬಿಜೆಪಿಗೆ ಮತ ನೀಡಲಿದ್ದಾರೆ ಎಂದು ಹೇಳಿದರು.
ಡಬಲ್ ಎಂಜಿನ್ ಸರ್ಕಾರ ಮಾಡಿದ ಕಾರ್ಯಗಳು ಬಹಳಷ್ಟಿವೆ. ನಮ್ಮ ಸರ್ಕಾರದಲ್ಲಿ 40 ಲಕ್ಷ ಮನೆಗಳಿಗೆ ನೀರು ಕೊಟ್ಟಿದ್ದೇವೆ. ಇದು ಜಲಕ್ರಾಂತಿ. ಕಿಸಾನ್ ಸಮ್ಮಾನ ಯೋಜನೆ ರೈತರಿಗೆ ಕೊಡಲು ನಿರ್ಧಾರ ಮಾಡಿ 16 ಸಾವಿರ ಕೋಟಿ ನಮಗೆ ಬಂದಿದೆ. 54 ಲಕ್ಷ ರೈತರ ಅಕೌಂಟ್ಗೆ ಹಣ ಜಮಾಯಿಸಲಾಗಿದೆ. ರೈತರ ಸಂಕಷ್ಟಕ್ಕೆ ಬಂದಿದ್ದು ಡಬಲ್ ಎಂಜಿನ್ ಸರ್ಕಾರ. ಪಿಎಫ್ಐ ಬ್ಯಾನ್ ಮಾಡಿದ್ದೇವೆ, ಕಾಂಗ್ರೆಸ್ನವರು ಅವರಿಂದ ಬೆಂಬಲ ತೆಗೆದುಕೊಳ್ಳುತ್ತಾರೆ. ಈಗ ಬಜರಂಗದಳ ರದ್ದು ಮಾಡುತ್ತೇವೆ ಅಂತಿದ್ದಾರೆ. ಬಜರಂಗದಳ ಬ್ಯಾನ್ ಮಾಡುವ ಅಧಿಕಾರ ಅವರಿಗೆ ಇಲ್ಲ. ಕಾಂಗ್ರೆಸ್ಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.
ಇದನ್ನೂ ಓದಿ: ಐಟಿ ದಾಳಿಗೆ ಕೇಂದ್ರ ಸರ್ಕಾರ ಕಾರಣ, ಇದು ಐಟಿ ದಾಳಿ ಮಾಡುವ ಸಮಯವಲ್ಲ: ಶೆಟ್ಟರ್ ಅಸಮಾಧಾನ