ಹುಬ್ಬಳ್ಳಿ: ಬಡವರ ಮನೆ ಬಾಗಿಲಿಗೆ ಆರೋಗ್ಯ ಸೇವೆಗಳನ್ನು ತಲುಪಿಸಲು ಸರ್ಕಾರ ಆದ್ಯತೆ ನೀಡಿದ್ದು, ಜನವರಿ ಅಂತ್ಯದೊಳಗೆ 438 ನಮ್ಮ ಕ್ಲಿನಿಕ್ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೆಳಗ್ಗೆ ಹುಬ್ಬಳ್ಳಿ ತಾಲೂಕಿನ ಬೈರಿದೇವರಕೊಪ್ಪದ ರೇಣುಕಾ ನಗರದಲ್ಲಿ ನಮ್ಮ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನಮ್ಮ ಸರ್ಕಾರ ಹೆಚ್ಚು ಆದ್ಯತೆ ನೀಡಿದೆ. ಆರೋಗ್ಯ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನ ಬಜೆಟ್ನಲ್ಲಿ 10 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಸಿಎಂ ಹೇಳಿದರು.
ಬಡವರಿಗೆ, ಜನಸಾಮಾನ್ಯರಿಗೆ ಅತ್ಯಂತ ಅವಶ್ಯಕತೆ ಇರುವ ಈ ಆರೋಗ್ಯ ಕಾರ್ಯಕ್ರಮ ನಗರದಲ್ಲಿನ ಬಡವರ ಆರೋಗ್ಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಬಡವರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಖಾಸಗಿ ಆಸ್ಪತ್ರೆಗಳು ಹೆಚ್ಚು ದರ ವಿಧಿಸುವುದರಿಂದ ತೊಂದರೆ ಆಗುತ್ತದೆ. ನಮ್ಮ ಸರ್ಕಾರ ಸ್ಪಂದನಾಶೀಲವಾಗಿದ್ದು, ಅವರ ತೊಂದರೆಗಳನ್ನು ತಪ್ಪಿಸಲು ನಮ್ಮ ಕ್ಲಿನಿಕ್ ಯೋಜನೆ ಜಾರಿಗೆ ತಂದಿದ್ದೇವೆ ಎಂದರು.
ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಿಗೆ ಉತ್ತಮ ಆರೋಗ್ಯ ಮತ್ತು ಶಿಕ್ಷಣ: ಬಡತನ ಮತ್ತು ಅನಾರೋಗ್ಯ ಎರಡೂ ಅಭಿವೃದ್ಧಿಯ ಶತ್ರುಗಳು. ಬಡತನದಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತದೆ. ಯಾವುದೇ ತಾರತಮ್ಯ ಇಲ್ಲದೇ ಎಲ್ಲರಿಗೂ ಉತ್ತಮ ಚಿಕಿತ್ಸೆ, ಉಚಿತ ಔಷಧೋಪಚಾರ ದೊರೆಯುವಂತೆ ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ.
ಹಿಂದುಳಿದ, ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳನ್ನು ಗುರುತಿಸಿ, ಶಿಕ್ಷಣ, ಆರೋಗ್ಯ ಸೇವೆ, ಮೂಲ ಸೌಕರ್ಯಗಳ ಸುಧಾರಣೆಗೆ ಕ್ರಮವಹಿಸಲಾಗಿದೆ. 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 45 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದು ಸಿಎಂ ಇದೇ ವೇಳೆ ಘೋಷಣೆ ಮಾಡಿದರು.
ಆರೋಗ್ಯ ಸೌಲಭ್ಯಕ್ಕೆ ಸಂಕಲ್ಪ: ಸಮುದಾಯ ಆಸ್ಪತ್ರೆಗಳ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಡಯಾಲಿಸಿಸ್ ಸೈಕಲ್ಸ್ ಗಳನ್ನು 60 ಸಾವಿರಕ್ಕೆ ಹೆಚ್ಚಳ ಮತ್ತು ಕ್ಯಾನ್ಸರ್ ಚಿಕಿತ್ಸೆಗೆ ಹೊಸದಾಗಿ 12 ಕೀಮೊಥೆರಪಿ ಕೇಂದ್ರಗಳನ್ನು ರಾಜ್ಯದಲ್ಲಿ ಆರಂಭಿಸಲಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಉಚಿತ ಕಣ್ಣು ತಪಾಸಣೆ, ಚಿಕಿತ್ಸೆ ಉಚಿತ ಕನ್ನಡಕ, 500 ಕೋಟಿ ವೆಚ್ಚದಲ್ಲಿ ಕಿವುಡರಿಗೆ ಶ್ರವಣಸಲಕರಣೆ ವಿತರಣೆ, ರೈತರಿಗೆ ಯಶ್ವನಿ ಯೋಜನೆ ಮುಂದುವರಿಕೆಗೆ ಕ್ರಮವಹಿಸಲಾಗಿದೆ.
ಹುಬ್ಬಳ್ಳಿಯಲ್ಲಿ ರೂ.350 ಕೋಟಿ ವೆಚ್ಚದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಶಂಕುಸ್ಥಾಪನೆ ಮಾಡಲಾಗುವುದು. ನವನಗರ ಕ್ಯಾನ್ಸರ್ ಆಸ್ಪತ್ರೆಗೆ ಹೊಸ ಉಪಕರಣ ಖರೀದಿಗೆ 10 ಕೋಟಿ ಅನುದಾನ ನೀಡಲಾಗಿದ್ದು, ಈ ಆಸ್ಪತ್ರೆ ಬಡವರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.
ಸುಲಭ ದರದ ಚಿಕಿತ್ಸೆಗೆ ಸಂಶೋಧನೆಗಳು: ಬಡವರಿಗೆ, ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಆರೋಗ್ಯ ಚಿಕಿತ್ಸೆ ದೊರೆಯಲು ಹೊಸ ಸಂಶೋಧನೆಗಳಿಂದ ಲಾಭ ದೊರೆಯುವಂತಾಗಬೇಕು. ವೆಂಟಿಲೇಟರ್ಸ್, ಸ್ಕ್ಯಾನರ್ಸ್ ಗಳಂತಹ ಉಪಕರಣಗಳ ಸೌಕರ್ಯ ಬಡಜನರಿಗೆ ದೊರೆಯುವ ದಿಸೆಯಲ್ಲಿ ನೂತನ ಸಂಶೋಧನೆಗಳು ನಡೆಯಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರಾಜ್ಯದಲ್ಲಿ 1250 ಜನೌಷಧ ಕೇಂದ್ರ: ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ಹೆಚ್ಚು ಕಾಳಜಿ ವಹಿಸಿದೆ. ದೇಶದಲ್ಲಿ ಕರ್ನಾಟಕ ರಾಜ್ಯ ಹೆಚ್ಚಿನ ಕೇಂದ್ರದ ಜನೌಷಧ ಕೇಂದ್ರಗಳು ಹೊಂದಿರುವ 2 ರಾಜ್ಯವಾಗಿದೆ. ಪ್ರಸ್ತುತ 1250 ಕೇಂದ್ರಗಳಿದ್ದು, ಮುಂದಿನ ವರ್ಷ ಇನ್ನೂ 1000 ಕೇಂದ್ರಗಳನ್ನು ಪ್ರಾರಂಭಿಸಲಾಗುವುದು.
ನಮ್ಮ ಕ್ಲಿನಿಕ್ನಲ್ಲಿ ಟೆಲಿಮೆಡಿಸಿನ್ ಮುಖಾಂತರ ಆರೋಗ್ಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪ್ರತಿ ಜಿಲ್ಲೆಯ ಎಲ್ಲ ಮಕ್ಕಳ ಆರೋಗ್ಯ ತಪಾಸಣೆ ಆಗಬೇಕು. ಜಿಲ್ಲೆಯ ಮಕ್ಕಳ ಚಿಕಿತ್ಸೆ, ಆರೋಗ್ಯ ದಾಖಲೆ ಆಗಬೇಕು. ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚುವಂತೆ ಮಾಡಬೇಕು ಎಂದು ತಿಳಿಸಿದರು.
ಓದಿ: ಸರ್ಕಾರಿ ವೈದ್ಯರ ಖಾಸಗಿ ಪ್ರಾಕ್ಟೀಸ್ ಕಡಿವಾಣಕ್ಕೆ ಕ್ರಮ: ಸಚಿವ ಸುಧಾಕರ್