ಹುಬ್ಬಳ್ಳಿ: ನಮ್ಮ ಜತೆಗೆ ಒಬ್ಬ ಸೂಪರ್ ಸ್ಟಾರ್ ಬಂದಿದ್ದಾರೆ ಎಂಬ ಆತಂಕ ಹಾಗೂ ಕಳವಳ ವಿರೋಧಿಗಳನ್ನ ಕಾಡುತ್ತಿದೆ. ಹೀಗಾಗಿ ಅವರ ಸೋಲು ಗೋಡೆಯ ಮೇಲೆ ಕಾಣುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗವಾಡಿದ್ದಾರೆ. ನಗರದ ವಿಮಾನ ನಿಲ್ದಾಣದಲ್ಲಿ "ಸುದೀಪ್ ಅವರನ್ನು ಸ್ಟಾರ್ ಪ್ರಚಾರಕರಾಗಿ ತೆಗೆದುಕೊಂಡ ಹಿನ್ನೆಲೆ ಎದುರಾದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದರು. "ಸ್ಟಾರ್ ನಟರನ್ನು ಚುನಾವಣೆಯಲ್ಲಿ ಪ್ರಚಾರಕ್ಕೆ ಬಳಕೆ ಮಾಡುವುದು ಹೊಸದಲ್ಲ, ದೇಶದಾದ್ಯಂತ ನಡೆದಿದೆ. ಇದೀಗ ರಾಜ್ಯದಲ್ಲೂ ಆಗತ್ತಿದೆ. ಈ ಹಿಂದೆ ಕುಮಾರಸ್ವಾಮಿ ಮತ್ತು ನಾನು 1996ರಲ್ಲಿ ರಾಮನಗರ ಉಪಚುನಾವಣೆಯಲ್ಲಿ ಅಂಬರೀಶ್ ಅವರನ್ನು ಕರೆತಂದು ಪ್ರಚಾರ ಮಾಡಿದ್ದೇವೆ. ಅದು ಕುಮಾರಸ್ವಾಮಿ ಅವರಿಗೆ ನೆನಪು ಇರಬಹುದು ಅಂತಾ ಅಂದುಕೊಳ್ಳುತ್ತೇನೆ" ಎಂದರು.
ಕಾಂಗ್ರೆಸ್ ಪಕ್ಷದಲ್ಲಿಯೂ ಹಲವರು ಸ್ಟಾರ್ಗಳಿದ್ದಾರೆ. ಹಲವರನ್ನು ತೆಗೆದುಕೊಂಡಿದ್ದಾರೆ. ಅವರ ಬಗ್ಗೆ ನಾವು ಮಾತನಾಡಿಲ್ಲ. ನಮಗೆ ಗೆಲುವಿನ ವಿಶ್ವಾಸ ಇದೆ. ಅವರಿಗೆ ಸೋಲಿನ ವಿಶ್ವಾಸ ಇದೆ. ಹೀಗಾಗಿ ನಟ ಸುದೀಪ್ ಕುರಿತು ಟೀಕೆ ಮಾಡುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: 'ಪ್ರಶ್ನಿಸುವ ಜನ ದನಿಗೆ ತಯಾರಾಗಿರಿ': ಸುದೀಪ್ ವಿರುದ್ಧ ಪ್ರಕಾಶ್ ರಾಜ್ ಅಸಮಾಧಾನ
ನಾಳೆ ಪಾರ್ಲಿಮೆಂಟ್ ಬೋರ್ಡ್ ಸಭೆ: ದೆಹಲಿಯಲ್ಲಿ ನಾಳೆ(ಶನಿವಾರ) ಪಾರ್ಲಿಮೆಂಟ್ ಬೋರ್ಡ್ನ ಸಭೆ ನಡೆಯಲಿದೆ. ಈಗಾಗಲೇ ಕ್ಷೇತ್ರ, ಜಿಲ್ಲಾಮಟ್ಟದಲ್ಲಿ ಅಭಿಪ್ರಾಯ ಸಂಗ್ರಹ ಸಭೆ ನಡೆದಿದೆ. ರಾಜ್ಯ ಸಮಿತಿ ಕೂಡ ಪರಿಶೀಲನೆ ಸಭೆ ಮಾಡಿ ಆಕಾಂಕ್ಷಿಗಳ ಪಟ್ಟಿಯನ್ನು ಶಾರ್ಟ್ ಲಿಸ್ಟ್ ಮಾಡಿದೆ. ನಾಳೆ ಪಾರ್ಲಿಮೆಂಟ್ ಬೋರ್ಡ್ ನಲ್ಲಿ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಕಲಘಟಗಿ ಕ್ಷೇತ್ರದಿಂದ ನಾಗರಾಜ್ ಛಬ್ಬಿ ಅವರು ನಮ್ಮನ್ನು ಸಂಪರ್ಕ ಮಾಡಿಲ್ಲ. ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದರು. ಇನ್ನು ಟಿಕೆಟ್ ಆಕಾಂಕ್ಷಿಗಳ ನಡುವೆ ಆಣೆ ಪ್ರಮಾಣದ ಕುರಿತು ಮಾತನಾಡಿ ಇದು ಹೊಸದೇನಲ್ಲ. ಚುನಾವಣೆ ಬಂದಾಗ ಆ ಕ್ಷೇತ್ರದ ಹಿರಿಯರು ಬೇರೆ ಬೇರೆ ಕ್ರಮ ಮಾಡುತ್ತಾ ಇರತ್ತಾರೆ. ಅದರ ಬಗ್ಗೆ ವಿಶ್ಲೇಷಣೆ ಮಾಡಲು ಬರೋದಿಲ್ಲ ಎಂದರು. ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧೆ ದೆಹಲಿಯಲ್ಲಿ ನಿರ್ಧಾರ ಆಗುತ್ತೆ. ಅಲ್ಲಿಯೇ ಅಂತಿಮವಾಗಲಿದೆ ಎಂದು ಸಿಎಂ ಬೊಮ್ಮಾಯಿ ಇದೇ ವೇಳೆ ಸ್ಪಷ್ಟಪಡಿಸಿದರು.
ಬಿಜೆಪಿಗೆ ನಟ ಸುದೀಪ್ ಬೆಂಬಲ: ಈ ಬಾರಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಭರ್ಜರಿ ಸಿನಿಮಾ ತಾರೆಗಳ ಮೆರುಗು ತುಂಬಲು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮುಂದಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೂಲಕ ಚಂದನ ವನದ ಪ್ರಭಾವಿ ನಟ ಕಿಚ್ಚ ಸುದೀಪ್ ಅವರನ್ನು ಸೆಳೆಯುವಲ್ಲಿ ಕಮಲ ಪಾಳಯ ಸಫಲವಾಗಿದೆ. ಪಕ್ಷದ ಆಯ್ದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಸುದೀಪ್ ಒಪ್ಪಿಗೆ ನೀಡಿದ್ದು, ಚುನಾವಣೆಗೂ ಮುನ್ನ ದೊಡ್ಡ ಶಕ್ತಿ ಲಭಿಸಿರುವ ಲೆಕ್ಕಾಚಾರದಲ್ಲಿದೆ.
ಇದನ್ನೂ ಓದಿ: ಬಿಜೆಪಿಗೆ ನಟ ಸುದೀಪ್ ಬೆಂಬಲ: ಕೇಸರಿ ಪಕ್ಷದ ಲೆಕ್ಕಾಚಾರವೇನು?