ಹುಬ್ಬಳ್ಳಿ: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಈ ಬಗ್ಗೆ ಆರೋಗ್ಯ ಸಚಿವರಿಗೆ ಸೂಚನೆ ನೀಡಿದ್ದೇನೆ. ಆದರೆ ರಾಜ್ಯದಲ್ಲಿ ಲಾಕ್ಡೌನ್ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮ ಸಿಬ್ಬಂದಿ ಜೊತೆ ಮಾತನಾಡಿದ ಅವರು, ನಾನು ಖಾಸಗಿ ಕಾರ್ಯಕ್ರಮ ಹಾಗೂ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಹುಬ್ಬಳ್ಳಿಗೆ ಆಗಮಿಸಿದ್ದೇನೆ. ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿದೆ. ವಿದೇಶಿ ಪ್ರಯಾಣಿಕರನ್ನು ಸಂಪೂರ್ಣವಾಗಿ ಟೆಸ್ಟ್ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ಕಳೆದ ಬಾರಿ ವಿದೇಶಿ ಪ್ರವಾಸಿಗರಿಂದ ಸೋಂಕು ಹರಡಿತ್ತು. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಲಾಕ್ಡೌನ್ ಪ್ರಸ್ತಾಪ ಇಲ್ಲ. ಲಾಕ್ಡೌನ್ ಮಾಡುವುದಿಲ್ಲ. ಜೊತೆಗೆ ಕ್ರಿಸ್ಮಸ್ ಹಾಗು ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಕೆಲ ನಿರ್ಬಂಧ ಹೇರುವ ಕುರಿತು ಇನ್ನೂ ತೀರ್ಮಾನ ಮಾಡಿಲ್ಲ ಎಂದರು.
ನಾಳೆ ದೆಹಲಿಗೆ ಹೋಗುತ್ತಿದ್ದೇನೆ. ಆರೋಗ್ಯ ಸಚಿವರನ್ನು ಭೇಟಿ ಮಾಡುತ್ತೇನೆ. ಕೋವಿಡ್ ವಾರಿಯರ್ಸ್‌ಗೆ ಬೂಸ್ಟರ್ ಡೋಸ್ ಕೊಡುವ ಬಗ್ಗೆ ಚರ್ಚೆ ಮಾಡುವೆ. ಈ ಕುರಿತು ಟಾಸ್ಕ್ಫೋರ್ಸ್ನಲ್ಲಿ ಕೂಡ ಚರ್ಚೆ ಮಾಡಲಿದ್ದೇವೆ. ಒಂದು ಡೋಸ್ ಎನ್ಸಿಬಿಎಸ್ಗೆ ಕಳುಹಿಸಲಾಗಿದೆ. ಅದರ ವರದಿ ಬಂದ ನಂತರ ಬೂಸ್ಟರ್ ಡೋಸ್ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿಎಂ ಹೇಳಿದರು.
ಇದನ್ನೂ ಓದಿ: ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನಲ್ಲಿ 3R ಬಂಡುಕೋರರ ದಾಳಿ: 30 ಮಂದಿ ಸಾವು
ಕೇರಳದ ಗಡಿ ಭಾಗಗಳಲ್ಲಿ ಹೆಚ್ಚಿನ ತಪಾಸಣೆ ಮಾಡುತ್ತೇವೆ. ಲಸಿಕೆ ನೀಡುವ ಕಾರ್ಯವನ್ನು ತೀವ್ರಗೊಳಿಸುತ್ತೇವೆ. ವಿದೇಶದಿಂದ ಬಂದವರನ್ನು ಒಂದು ವಾರ ಗಮನಿಸುತ್ತೇವೆ. ವಿದೇಶದಿಂದ ಹಾಗೂ ಕೇರಳದಿಂದ ಬರುವವರ ಮೇಲೆ ನಿಗಾ ವಹಿಸಲು ಡಿಸಿಗಳಿಗೆ ಸೂಚನೆ ನೀಡಿದ್ದೇನೆ.
ಹೊಸ ತಾಲೂಕುಗಳಿಗೆ ಮೂಲಸೌಕರ್ಯ ನೀಡದ್ದಕ್ಕೆ ಹೈಕೋರ್ಟ್ ಚಾಟಿ ಬೀಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಕೋವಿಡ್ ಬಂದ ಹಿನ್ನೆಲೆಯಲ್ಲಿ ತಡವಾಗಿದೆ. ಕನಿಷ್ಟ ಸೌಲಭ್ಯಗಳನ್ನು ನೀಡುತ್ತೇವೆ ಎಂದರು.
ಇದನ್ನೂ ಓದಿ: ಅಮೆರಿಕ: ಶಾಲೆಯಲ್ಲಿ 15 ವರ್ಷದ ಬಾಲಕನಿಂದ ಗುಂಡಿನ ದಾಳಿ, ಮೂವರು ಸಾವು
ಜೆಡಿಎಸ್ ಜೊತೆ ಮೈತ್ರಿ ವಿಚಾರವಾಗಿ ಮಾತನಾಡುತ್ತಾ, ದೇವೇಗೌಡರು ಹಾಗೂ ಪ್ರಧಾನಿಯವರು ನಿನ್ನೆ ಭೇಟಿ ಮಾಡಿ ಹಲವು ವಿಚಾರ ಚರ್ಚೆ ಮಾಡಿದ್ದಾರೆ. ರಾಜ್ಯದಲ್ಲಿ ಕುಮಾರಸ್ವಾಮಿ ಹಾಗೂ ಬಿಎಸ್ವೈ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.