ಹುಬ್ಬಳ್ಳಿ(ಧಾರಾವಾಡ): ಮಾಂಡೌಸ್ ಚಂಡಮಾರುತ ಹಾಗೂ ಹವಾಮಾನ ವೈಪರೀತ್ಯದಿಂದ ಉಂಟಾಗಿರುವ ಶೀತ ಹಾಗೂ ಮಳೆಯ ವಾತಾವರಣದ ಮಧ್ಯೆ ಜ್ವರದ ಕಾಟ ಜಿಲ್ಲೆಯಲ್ಲಿ ಶುರುವಾಗಿದೆ. ಇದರ ಮಧ್ಯೆ ಕೀಟಜನ್ಯದಿಂದ ಬರುವ ಡೆಂಗ್ಯೂ, ಚಿಕನ್ ಗುನ್ಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ಹಾವಳಿಯೂ ಹೆಚ್ಚುತ್ತಿದ್ದು ಜಿಲ್ಲೆಯ ಜನತೆ ನರಳುವಂತಾಗಿದೆ.
ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಅನ್ವಯ, ಜಿಲ್ಲೆಯಲ್ಲಿ 2,500ಕ್ಕೂ ಹೆಚ್ಚು ಜನರಲ್ಲಿ ಡೆಂಗ್ಯೂ ಲಕ್ಷಣಗಳಿವೆ. ಈ ಪೈಕಿ ತಪಾಸಣೆಗೆ ಒಳಪಡಿಸಿದಾಗ 247 ಜನರಲ್ಲಿ ರೋಗ ದೃಢಪಟ್ಟಿದೆ. ಅದರಲ್ಲೂ ನವೆಂಬರ್ ತಿಂಗಳಲ್ಲಿಯೇ 12 ಜನರಲ್ಲಿ ಡೆಂಗ್ಯೂ ಕಂಡುಬಂದಿದೆ. ಚಿಕನ್ ಗುನ್ಯಾ ಗುಣಲಕ್ಷಣ ಕಂಡುಬಂದ 1,051 ಜನರನ್ನು ತಪಾಸಣೆಗೊಳಪಡಿಸಿದ್ದು, ಈ ಪೈಕಿ 33 ಜನರಿಗೆ ರೋಗ ಬಾಧಿಸಿದೆ.
ಧಾರವಾಡ ಗ್ರಾಮೀಣದಲ್ಲಿ 2, ಕುಂದಗೋಳ, ಧಾರವಾಡ ಶಹರ ವ್ಯಾಪ್ತಿಯಲ್ಲಿ ತಲಾ 1, ಹುಬ್ಬಳ್ಳಿ ಶಹರ ವ್ಯಾಪ್ತಿಯಲ್ಲಿ ನಾಲ್ವರಲ್ಲಿ ಮಲೇರಿಯಾ ಪತ್ತೆಯಾಗಿದೆ. ಇವರೆಲ್ಲರೂ ಜಿಲ್ಲೆಯ ಹೊರಗಿನವರು. ಹೀಗಾಗಿ ಜಿಲ್ಲೆಯಲ್ಲಿ ಮಲೇರಿಯಾ ಶೂನ್ಯ ಸ್ಥಿತಿಯಲ್ಲಿದೆ. ಮೆದುಳು ಜ್ವರ ಲಕ್ಷಣ ಕಂಡುಬಂದ 15 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಚಿಕನ್‌ಗುನ್ಯಾ ಶಹರ ಭಾಗಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು ಹೊಡೆತ ನೀಡುತ್ತಿದೆ.
ಹುಬ್ಬಳ್ಳಿ ಗ್ರಾಮೀಣದಲ್ಲಿ 5, ಕುಂದಗೋಳ, ನವಲಗುಂದದಲ್ಲಿ ತಲಾ 2, ಹುಬ್ಬಳ್ಳಿ ಶಹರ ವ್ಯಾಪ್ತಿಯಲ್ಲಿ ಒಬ್ಬರಲ್ಲಿ ಚಿಕನ್‌ಗುನ್ಯಾ ಪ್ರಕರಣವಿದೆ. ಈಗ ಚಂಡಮಾರುತ ಹಾಗೂ ಸಹಜವಾಗಿಯೇ ಹವಾಮಾನ ಸರಿ ಇರದ ಕಾರಣ ಕಿಮ್ಸ್ ಆಸ್ಪತ್ರೆಗೆ ರೋಗಿಗಳ ಸಂಖ್ಯೆ ಜಾಸ್ತಿಯಾಗಿದ್ದು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾಣಿ ಹೇಳಿದರು.
ಇದನ್ನೂ ಓದಿ: ಕಲ್ಯಾಣ ಕರ್ನಾಟಕದ ಮಕ್ಕಳಲ್ಲಿ ಹೆಚ್ಚಾದ ಡೆಂಗ್ಯೂ, ವೈರಲ್ ಫೀವರ್: 3ನೇ ಅಲೆ ಮುನ್ಸೂಚನೆಯೇ?