ಹುಬ್ಬಳ್ಳಿ: ಬಿಜೆಪಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪೌರತ್ವ ಜನಜಾಗೃತಿ ಸಮಾವೇಶದ ಅಂಗವಾಗಿ ಇಂದು (ಜ.18) ಹುಬ್ಬಳ್ಳಿ ನಗರದಲ್ಲಿ ಸಂಚಾರಿ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಹು-ಧಾ ಮಹಾನಗರ ಪೊಲೀಸ್ ಆಯುಕ್ತರು ಆದೇಶ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ.
ಮಾರ್ಗ ಬದಲಾವಣೆ:
ಬೆಂಗಳೂರಿನಿಂದ ಆಗಮಿಸುವ ಲಘು ವಾಹನಗಳು ಗಬ್ಬೂರ ಬೈಪಾಸ್ದಿಂದ ತಾರಿಹಾಳ ಅಂಡರ್ ಬ್ರಿಡ್ಜ್ ಇಂಟರ್ಚೆಂಜ್ ಮೂಲಕ ಗೋಕುಲ ರೋಡ್ ಮಾರ್ಗವಾಗಿ ಹುಬ್ಬಳ್ಳಿ ಶಹರ ಪ್ರವೇಶಿಸಲಿವೆ. ಇನ್ನೂ ಹುಬ್ಬಳ್ಳಿ ಕಡೆಯಿಂದ ಬೆಂಗಳೂರಿಗೆ ತೆರಳುವ ವಾಹನಗಳು ಹೊಸೂರ ಕ್ರಾಸ್, ಗೋಕುಲ ರೋಡ್ ಮೂಲಕ ತಾರಿಹಾಳ ಅಂಡರ್ ಬ್ರಿಡ್ಜ್ ಇಂಟರ್ಚೆಂಜ್ನಿಂದ ಸಂಚರಿಸಲಿವೆ.
ನವಲಗುಂದ ಗದಗ ರೋಡ್ನಲ್ಲಿ ಸಂಚರಿಸುವ ಎಲ್ಲಾ ವಾಹನಗಳು ಗದಗ ರಸ್ತೆಯ ಅಂಡರ್ ಬ್ರಿಡ್ಜ್, ದೇಸಾಯಿ ಸರ್ಕಲ್, ಓವರ್ ಬ್ರಿಡ್ಜ್ ಮೂಲಕ ಹಾಯ್ದು ಕೋರ್ಟ್ ಸರ್ಕಲ್, ಪ್ರಭು ಮೆಡಿಕಲ್ ಮುಂದಿನಿಂದ ಹಳೆ ಬಸ್ ನಿಲ್ದಾಣ ತಲುಪಲಿವೆ.
ಹುಬ್ಬಳ್ಳಿ ಶಹರದಿಂದ ಹೋಗುವ ಖಾಸಗಿ ಬಸ್, ಕೆಎಸ್ಆರ್ಟಿಸಿ ಬಸ್, ಟೆಂಪೋ, ಬೈಕ್, ನಾಲ್ಕು ಚಕ್ರದ ವಾಹನಗಳು ಎಸಿಪಿ ಟ್ರಾಫಿಕ್ ಆಫೀಸ್ ಕ್ರಾಸ್, ಶಾರದಾ ಭವನ, ಅಶೋಕ ನಗರ ಅಂಡರ್ ಬ್ರಿಡ್ಜ್, ಅಶೋಕ ನಗರ ಪೊಲೀಸ್ ಠಾಣೆ, ಜನತಾ ಸ್ಕೂಲ್ ಮೂಲಕ ಗೋಪನಕೊಪ್ಪ, ನವಲಗುಂದ, ಗದಗ ರೋಡ್ ಕಡೆಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ.
ಗೋಕುಲ ರೋಡ್ ಮತ್ತು ಧಾರವಾಡ ಕಡೆಯಿಂದ ಬರುವ ಎಲ್ಲಾ ಕೆಎಸ್ಆರ್ಟಿಸಿ ಬಸ್ಗಳು ಹೊಸೂರ ಸರ್ಕಲ್, ಭಗತಸಿಂಗ್ ವೃತ್ತ, ಕಾಟನ್ ಮಾರ್ಕೆಟ್, ಎಸಿಪಿ ಆಫೀಸ್ ಕ್ರಾಸ್ ಶಾರದಾ ಹೋಟೆಲ್, ಬೆಂಬಳಗಿ ಕ್ರಾಸ್, ಬಾಳಿಗಾ ಕ್ರಾಸ್ ಬಲ ತಿರುವು ಪಡೆದು ಹುಬ್ಬಳ್ಳಿ ಸ್ಕ್ಯಾನ್ ಸೆಂಟರ್ ಮೂಲಕ ಹಾದು ಕೋರ್ಟ್ ಸರ್ಕಲ್ ಮೂಲಕ ಓವರ್ ಬ್ರಿಡ್ಜ್, ಸರ್ವೋದಯ ಸರ್ಕಲ್ ಮುಖಾಂತರ ಗದಗ ಹಾಗೂ ನವಲಗುಂದ ಕಡೆಗೆ ಹೋಗಬಹುದು.
ಪಾರ್ಕಿಂಗ್ ವ್ಯವಸ್ಥೆ: ನವಲಗುಂದ, ನರಗುಂದ, ಬಾಗಲಕೋಟೆ, ವಿಜಯಪುರ ಕಡೆಯಿಂದ ಬರುವ ವಾಹನಗಳಿಗೆ ಹುಬ್ಬಳ್ಳಿಯ ಜಮಖಾನ್ ಕ್ಲಬ್ ಪಕ್ಕದಲ್ಲಿರುವ ರೈಲ್ವೆ ಮೈದಾನ, ಗದಗ ಜಿಲ್ಲೆ ಹುಬ್ಬಳ್ಳಿ ಗ್ರಾಮಾಂತರ ಕಡೆಯಿಂದ ಬರುವ ವಾಹನಗಳು ಗದಗ ರೋಡ್ನ ಕಿಲ್ಲೆ ಗ್ರೌಂಡನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಹಾವೇರಿ, ಶಿಗ್ಗಾಂವ, ಹಾನಗಲ್ ಕಡೆಯಿಂದ ಬರುವ ವಾಹನಗಳು ಹೆಗ್ಗೇರಿ ಗ್ರೌಂಡ್, ಅಂಬೇಡ್ಕರ್ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಕಲಘಟಗಿಯಿಂದ ಬರುವ ವಾಹನಗಳು ಗಿರಣಿ ಚಾಳ ಶಾಲಾ ಆವರಣ, ಎಂಟಿಮಿಲ್ ಗ್ರೌಂಡ್ ಹತ್ತಿರ ಅವಕಾಶ ಕಲ್ಪಿಸಿದ್ದು, ಧಾರವಾಡ, ಬೆಳಗಾವಿ ಗ್ರಾಮೀಣ ಭಾಗದಿಂದ ಬರುವ ವಾಹನಗಳಿಗೆ ರಾಯ್ಕರ್ ಮೈದಾನ ಹೊಸೂರಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ವಿಐಪಿ ಹಾಗೂ ವಿವಿಐಪಿ ವಾಹನಗಳಿಗೆ ಲ್ಯಾಮಿಂಗ್ಟನ್ ಸ್ಕೂಲ್ ಆವರಣದಲ್ಲಿ ಹಾಗೂ ಪೊಲೀಸ್ ಹಾಗೂ ಕಂದಾಯ ಅಧಿಕಾರಗಳ ವಾಹನಗಳಿಗೆ ಮಹಾನಗರ ಪಾಲಿಕೆ ಆವರಣದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಆರ್. ದಿಲೀಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.