ಹುಬ್ಬಳ್ಳಿ: ಪೌರತ್ವ ಎಂಬುದು ರಾಷ್ಟ್ರೀಯ ವಿಷಯವಾಗಿದ್ದು, ಈ ಹೋರಾಟಕ್ಕೆ ಯಾವುದೇ ಜಾತಿ ಮೀಸಲಿಲ್ಲ. ಆದರೆ ಈ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದು, ಈ ಬಗ್ಗೆ ಸರ್ವಸಮ್ಮತವಾಗಿ ತೀರ್ಮಾನಿಸಬೇಕು. ಈ ದೃಷ್ಟಿಯಿಂದ ಸರ್ವಪಕ್ಷಗಳ ಸಭೆ ಕರೆದು ಸಮಾಲೋಚಿಸಿ ವಿವಾದ ಬಗೆಹರಿಸಬೇಕೆಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಸಲಹೆ ನೀಡಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರ ಹಾಗೂ ರಾಜ್ಯದಲ್ಲಿ ಬಹಳಷ್ಟು ಬೆಳವಣಿಗೆಯಾಗುತ್ತಿದ್ದು, ಮನಸ್ಸಿಗೆ ಘಾಸಿ ಮಾಡುವಂತ ಘಟನೆಗಳು ನಡೆಯುತ್ತಿವೆ. ಮೋದಿ ಮತ್ತು ಅಮಿತ್ ಶಾ ಜಾತ್ಯಾತೀತವಾಗಿ ಜಾತಿ ಇಟ್ಟುಕೊಂಡು ಮಾಡಲಿಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಪೌರತ್ವ ತಿದ್ದುಪಜಿ ಕಾಯ್ದೆ ವಿರುದ್ಧದ ಹೋರಾಟಕ್ಕೆ ಕೇವಲ ಒಂದು ಜಾತಿ ಮೀಸಲಿಲ್ಲ. ಆದರೆ ಈ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದು, ಬಡವರ ಮತ್ತು ಶ್ರಮಜೀವಿಗಳನ್ನು ಅವಮಾನಿಸುತ್ತಿದ್ದಾರೆ ಎಂದು ಹರಿಹಾಯ್ದರು.
'ಉದ್ದವ್ ಠಾಕ್ರೆ ಕ್ಷಮೆ ಕೇಳಬೇಕು'
ಗಡಿ ವಿವಾದ ಕುರಿತಂತೆ ಕಳೆದ 15 ದಿನಗಳಿಂದ ಉದ್ಧವ್ ಠಾಕ್ರೆ ಕಾನೂನು ಹೋರಾಟ ಮತ್ತು ರಾಜಕೀಯ ಮಾಡಲು ಇಬ್ಬರು ಸಚಿವರನ್ನು ನೇಮಿಸಿದ್ದಾರೆ. ಇದಕ್ಕೆ ತಂಡವನ್ನು ರೂಪಿಸಿ ಹೋರಾಟವನ್ನು ತೀವ್ರಗೊಳಿಸಿ ಎಂದು ಆದೇಶ ನೀಡಿದ್ದಾರೆ. ನಾಗಪುರದಲ್ಲಿ ಉದ್ಧವ್ ಠಾಕ್ರೆ ಬೆಳಗಾವಿ, ಕಾರವಾರ, ನಿಪ್ಪಣಿ ಬಗ್ಗೆ ಮಾತನಾಡಿ ಕರ್ನಾಟಕದ ಈ ಮೂರು ಪ್ರದೇಶಗಳು 'ಆಕ್ರಮಿತ' ಎಂದು ಹೇಳಿದ್ದಾರೆ. ಈ ಹೇಳಿಕೆ ಮೂಲಕ ಅವರು ಕರ್ನಾಟಕಕ್ಕೆ ಅವಮಾನ ಮಾಡಿದ್ದಾರೆ. ಈ ಹಿಂದೆ ಮಹತ್ಮಾ ಗಾಂಧಿ, ಇಂದಿರಾ ಗಾಂಧಿ ಬೆಳಗಾವಿ ಕರ್ನಾಟಕ ರಾಜ್ಯದ್ದು ಎಂದು ತಿಳಿಸಿದ್ದಾರೆ. ಈಗ ಬೆಳಗಾವಿ ನಮ್ಮದು ಎಂದು ಹೇಳಿದ್ದು ಸರಿಯಲ್ಲ. ಹೀಗಾಗಿ ಕೂಡಲೇ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಗಡಿ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದು, ಈ ರೀತಿಯ ಬೆಳವಣಿಗೆ ಆದರೂ ಕೂಡಾ ರಾಜ್ಯದ ಸಿಎಂ ಹಾಗೂ ಸಚಿವರು ಮಾತನಾಡದೇ ಇರುವುದೇಕೆ? ಈ ಬಗ್ಗೆ ರಾಜ್ಯದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಎಚ್ಚರಿಸುತ್ತೇನೆ. ಅಲ್ಲದೇ ತಮ್ಮ ಕ್ಯಾಬಿನೆಟ್‌ನಲ್ಲಿ ಯಾರನ್ನಾದರೂ ಸಚಿವರನ್ನಾಗಿ ಮಾಡಿ ಆದರೆ ಗಡಿ ವಿಚಾರದಲ್ಲಿ ಯಾಕೆ ಶಾಂತವಾಗಿದ್ದೀರಿ? ಇಂತಹ ವಿಚಾರದಲ್ಲಿ ಕೂಡಲೇ ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಿ ಸರಿಯಾದ ಪಾಠ ಕಲಿಸಬೇಕು ಎಂದು ತಿಳಿಸಿದರು.
'ಸ್ವತಂತ್ರ ತನಿಖೆಯಾಗಲಿ'
ಮಂಗಳೂರು ಗಲಭೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಎಚ್. ಕೆ.ಪಾಟೀಲ, ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿಯೇ ಮಂಗಳೂರಿನಲ್ಲಿ ವಿಡಿಯೋ ಹರಿಬಿಟ್ಟಿದೆ. ಸರ್ಕಾರಕ್ಕೆ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶವಿದ್ದರೆ ಈ ರೀತಿಯಾಗಿ ನಡೆದುಕೊಳ್ಳುತ್ತಿರಲಿಲ್ಲ ಎಂದರು.
'ಮಹದಾಯಿ ಬಗ್ಗೆ ಜಾವಡೇಕರ್ ಅವರದ್ದು ಕಣ್ಣೊರೆಸುವ ತಂತ್ರ'
ಮಹದಾಯಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರ ಪತ್ರ ಕಣ್ಣೊರೆಸುವ ತಂತ್ರವಷ್ಟೇ. ರಾಜ್ಯದ ಜನರನ್ನು ದಾರಿ ತಪ್ಪಿಸಲು ಅವರು ಪತ್ರ ಬರೆದಿದ್ದಾರೆ ಎಂದು ಕೇಂದ್ರದ ವಿರುದ್ದ ಕಿಡಿಕಾರಿದರು.