ಹುಬ್ಬಳ್ಳಿ : ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಕಳೆದ ಒಂದು ವಾರದ ಹಿಂದೆಯಷ್ಟೇ ಕಂದಾಯ ಸಚಿವ ಆರ್.ಅಶೋಕ ಗ್ರಾಮ ವಾಸ್ತವ್ಯ ಮಾಡಿದ್ದರು.
ಸರ್ಕಾರದ ಯೋಜನೆಯನ್ನು ಜನರ ಮನೆ ಬಾಗಿಲಿಗೆ ಕೊಂಡೊಯುವ ಸದುದ್ದೇಶದಿಂದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಎಂಬ ಅಭಿಯಾನಕ್ಕೆ ಮುನ್ನುಡಿ ಬರೆದಿದ್ದರು. ಆದರೆ, ಈ ಗ್ರಾಮದಲ್ಲಿ ಪ್ರಮುಖ ರಸ್ತೆಗೆ ಮಾತ್ರ ಕಾರ್ಯಕಲ್ಪ ಇಲ್ಲದಂತಾಗಿದೆ.
ಎಲ್ಲೆಂದರಲ್ಲಿ ಕಸ, ತ್ಯಾಜ್ಯ ನೀರು ನಿಂತಿದೆ. ಜನರು ಈ ರಸ್ತೆಯಲ್ಲಿ ಓಡಾಡಬೇಕು ಅಂದರೆ ಸಾಹಸವನ್ನೇ ಮಾಡಬೇಕಿದೆ. ಇನ್ನೂ ಮಳೆಗಾಲದಲ್ಲಿ ಈ ರಸ್ತೆಯ ಸಮಸ್ಯೆಯಂತೂ ಹೇಳತೀರದಾಗಿದೆ.
ಛಬ್ಬಿ ಗ್ರಾಮದಲ್ಲಿ ಬಹುತೇಕ ರಸ್ತೆಗಳಲ್ಲಿ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಆದರೆ, ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಈವರೆಗೂ ದುರಸ್ಥಿ ಕಾರ್ಯ ಒದಗಿ ಬಂದಿಲ್ಲ. ರಸ್ತೆ ಒತ್ತುವರಿಯಾಗಿದ್ದು, ಅರವತ್ತು ಅಡಿ ರಸ್ತೆಯಲ್ಲಿನ ಸಮಸ್ಯೆಗಳ ಬಗ್ಗೆ ಸ್ಥಳೀಯ ಆಡಳಿತ ಮಂಡಳಿಯವರು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.