ಹುಬ್ಬಳ್ಳಿ: ಸಿಎಂ ದೆಹಲಿ ಭೇಟಿಗೆ ಬೇರೆ ಅರ್ಥ ಕಲ್ಪಿಸುವುದು ಅನಗತ್ಯ, ಇಲಾಖೆಗಳಿಗೆ ಸಂಬಂಧಿಸಿದಂತೆ ಹಾಗೂ ಅನುದಾನಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ದೆಹಲಿಗೆ ಹೋಗುತ್ತಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಯಾರೂ ಸಹ ಪ್ರಸ್ತಾಪಿಸಿಲ್ಲ, ಇದು ಮಾಧ್ಯಮ ಸೃಷ್ಟಿ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾದ ನೆರೆ ಹಾನಿ ಬಗ್ಗೆ ಕೇಂದ್ರದ ಗಮನಕ್ಕೆ ತಂದು ಅನುದಾನ ಬಿಡುಗಡೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲು ಸಿಎಂ ದೆಹಲಿಗೆ ತೆರಳಿದ್ದಾರೆ. ಬಿಜೆಪಿಯಲ್ಲಿ ಸಿಎಂ ಬದಲಾವಣೆ ಎಂಬುದು ಮಾಧ್ಯಮಗಳ ಸೃಷ್ಟಿ, ನೀವೇ ಎಲ್ಲಾ ಹೇಳುತ್ತಿದ್ದೀರಿ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ವಿಚಾರ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕೈಗಾರಿಕೆಗಳಿಗೆ ಆಕ್ಸಿಜನ್ ಕೊರತೆ ಕುರಿತು ಪ್ರತಿಕ್ರಿಯೆ ನೀಡಿದ ಶೆಟ್ಟರ್, ಕೊರೊನಾ ಹಿನ್ನೆಲೆಯಲ್ಲಿ ಆಕ್ಸಿಕನ್ ಬೇಡಿಕೆ ಹೆಚ್ಚಿದೆ, ಆದರೆ ಉತ್ಪಾದನೆ ಅಷ್ಟೇ ಇರುವುದರಿಂದ ಕೊರತೆ ಕಂಡು ಬಂದಿದೆ. ಉತ್ಪಾದನೆ ಹೆಚ್ಚಿಸಲು ಈಗಾಗಲೇ ನಿರ್ದೇಶನ ನೀಡಲಾಗಿದ್ದು, ಮೊದಲು ಜೀವ ಉಳಿಸಲು ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ. ತದನಂತರದಲ್ಲಿ ಕೈಗಾರಿಕೆಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದು ಹೇಳಿದರು.
ಇನ್ನು ಡ್ರಗ್ಸ್ ದಂಧೆಗೆ ಸಂಬಂಧಪಟ್ಟಂತೆ ಮಾತನಾಡಿದ್ದು, ಈ ಜಾಲದಲ್ಲಿ ಯಾವುದೇ ರಾಜಕಾರಣಿಗಳ ಮಕ್ಕಳಿದ್ದರೂ ಸಹ ಅಂತವರ ಹೆಸರನ್ನು ನನಗೆ ನೀಡಿ, ಆ ಹೆಸರುಗಳನ್ನು ಗೃಹ ಸಚಿವರಿಗೆ ತಲುಪಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.