ಹುಬ್ಬಳ್ಳಿ: ಖ್ಯಾತ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಅವರ ಹತ್ಯೆಯಾಗಿ ನಾಲ್ಕು ದಿನ ಕಳೆಯುತ್ತಿದೆ. ಪ್ರಕರಣದ ಆರೋಪಿಗಳನ್ನು ಆರು ದಿನಗಳ ಕಸ್ಟಡಿಗೆ ಪಡೆದಿರುವ ಖಾಕಿಪಡೆ ಮೊದಲ ದಿನವೇ ಮಹತ್ವದ ಸತ್ಯವನ್ನು ಬಾಯಿ ಬಿಡಿಸಿದ್ದಾರೆ.
ಗುರೂಜಿ ಕೊಲೆಯಾದ ಪ್ರೆಸಿಡೆಂಟ್ ಹೋಟೆಲ್ಗೆ ಕೊಲೆ ಆರೋಪಿಗಳನ್ನು ಕರೆದುಕೊಂಡು ಹೋಗಿ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ನಂತರ ಹತ್ಯೆಯ ಇಂಚಿಂಚು ಮಾಹಿತಿ ಕಲೆಹಾಕಿದ್ದಾರೆ. ಹತ್ಯೆಗೆ ಜುಲೈ 3 ರಂದೇ ಪ್ಲಾನ್ ನಡೆದಿದೆ. ಇದಕ್ಕಾಗಿ ಮೂರು ದಿನದ ಹಿಂದೆ ಮನೆ ಬಿಟ್ಟಿರುವ ಹಂತಕರು ಹೊಸೂರು ವೃತ್ತದ ಬಳಿಯಿರುವ ಕೆನರಾ ಹೋಟೆಲ್ ರೂಮ್ ನಂಬರ್ 220 ರಲ್ಲಿ ವಾಸ ಇದ್ದರು ಎಂಬುದಾಗಿ ತಿಳಿದು ಬಂದಿದೆ.
ಹತ್ಯೆಗೆ ಪಕ್ಕಾ ಪ್ಲಾನ್ ಮಾಡಿ ಗುರೂಜಿ ಮತ್ತು ತಮ್ಮ ನಡುವೆ ಇರುವ ವ್ಯಾಜ್ಯದ ಸಂಧಾನಕ್ಕೆಂದು ಕರೆದಿದ್ದಾರೆ. ಇದಕ್ಕೆ ಗುರೂಜಿ ಸಹ ಒಪ್ಪಿದ್ದರು. ಹೋಟೆಲ್ಗೆ ಬರುವಾಗ ಕೈಯಲ್ಲಿ ದಾಖಲೆ ಪತ್ರಗಳನ್ನ ಹಿಡಿದುಕೊಂಡು ಬಂದಿದ್ದ ಹಂತಕರು ಸಂಚು ಗೊತ್ತಾಗಬಾರದು ಅಂತ ದಾಖಲೆ ಪತ್ರಗಳ ಮಧ್ಯೆ ಎರಡು ಚಾಕು ಇಟ್ಟುಕೊಂಡು ಬಂದಿದ್ದಾರೆ.
ಗುರೂಜಿ ಹತ್ಯೆ ನಂತರ ದಾಖಲೆ ಪತ್ರ ಮತ್ತು ಒಂದು ಚಾಕುವನ್ನು ಹೋಟೆಲ್ ಮುಂಭಾಗದ ಕಸದ ರಾಶಿಯಲ್ಲಿ ಎಸೆದು ಎಸ್ಕೇಪ್ ಆಗಿದ್ದಾರೆ. ಇದನ್ನು ಖಾಕಿ ಪಡೆ ವಶಪಡಿಸಿಕೊಂಡಿದೆ. ಆರೋಪಿಗಳು ಮಾರ್ಗ ಮಧ್ಯೆ ಎಸೆದ ಇನ್ನೊಂದು ಚಾಕುವಿಗಾಗಿ ತಲಾಶ್ ನಡೆಸಿದ್ದು, ತನಿಖೆಯನ್ನು ಚುರುಕುಗೊಳಿಸಿದೆ.