ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಕಳಸಾ - ಬಂಡೂರಿ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗವು ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ವಿಜಯೋತ್ಸವ ಆಚರಣೆ ಮಾಡಿದರು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಘೋಷಣೆ ಕೂಗಿ ಸಂಭ್ರಮಿಸಿದರು.
ಇದೇ ವೇಳೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಮಾತನಾಡಿ, ಕಳೆದ ಐದಾರು ದಶಕಗಳ ಅವಿರತ ಹೋರಾಟದ ತಾತ್ವಿಕ ಅಂತ್ಯದ ಫಲವಾಗಿ ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ. ಇದಕ್ಕೆ ಕೇಂದ್ರದ ಜಲ ಸಚಿವರು, ಪ್ರಧಾನಿ ನರೇಂದ್ರ ಮೋದಿ, ಹಾಗೂ ರಾಜ್ಯದ ಮುಖ್ಯಮಂತ್ರಿ, ರಾಜ್ಯ ಜಲ ಸಚಿವರ ವಿಶೇಷ ಕಾಳಜಿಯಿಂದ ಕಳಸಾ -ಬಂಡೂರಿಗೆ ಅನುಮೋದನೆ ಸಿಕ್ಕಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ ಮೂರು ರಾಜ್ಯಗಳ ಜನರಿಗೆ ಅನ್ಯಾಯ ಆಗದ ಹಾಗೇ ವ್ಯಾಜ್ಯ ಇತ್ಯರ್ಥ ಪಡಿಸಿ ರಾಜ್ಯಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸಿದ್ದು ಸಂತಸ ತಂದಿದೆ ಎಂದು ಹೇಳಿದರು.
ನವಲಗುಂದದ ರೈತ ಮುಖಂಡ ವೀರೇಶ್ ಸೊಬರದಮಠ ಮಾತನಾಡಿ, ಕಳಸಾ - ಬಂಡೂರಿ ಯೋಜನೆಯ ಹೋರಾಟದ ಶ್ರೇಯಸ್ಸು ಹೋರಾಟಕ್ಕೆ ಬೆಂಬಲಿಸಿದ ಎಲ್ಲ ರೈತರಿಗೂ ಸಿಗಬೇಕು. ಇಲಾಖೆ ಪರವಾನಗಿ ಕೊಟ್ಟಿದ್ದಕ್ಕೆ ನಾವೇನು ಹೆಚ್ಚಿಗೆ ಖಷಿಪಟ್ಟು ಹಬ್ಬ ಆಚರಣೆ ಮಾಡುವುದಿಲ್ಲ ಇದು ಮೊದಲೇ ಸಿಗಬೇಕಿತ್ತು,
ಆದರೆ, ಇದನ್ನು ರಾಜಕೀಯ ಬಳಸಿದ್ದಕ್ಕಾಗಿ ನೋವಿದೆ. ಆದರೂ ಕೂಡ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ, ಕೇಂದ್ರ ಸರ್ಕಾರ ಶೀಘ್ರವಾಗಿ ಆದೇಶ ಪ್ರತಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಬೇಕು, ಕಾಮಗಾರಿ ಮಾಡಲು ಟೆಂಡರ್ ಕರೆಯುಬೇಕು.
ಟೆಂಡರ್ ಕರೆಯುವರೆಗೂ ನಮ್ಮ ಹೋರಾಟ ನಿರಂತರ ರಾಜ್ಯದ ಮಂತ್ರಿಗಳು, ಜಲಸಂಪನ್ಮೂಲ ಸಚಿವರು ಬೇಗ ಕಾಮಗಾರಿ ಟೆಂಡರ್ ಕರೆಯಲಿ ನಮ್ಮ ಮುಂದಿನ ಹೋರಾಟ ನೀರಾವರಿ ಯೋಜನೆಗೆ ತಪ್ಪು ಹೆಜ್ಜೆ ಇಟ್ಟ ಸರ್ಕಾರದ ವಿರುದ್ಧ ಮುಂದುವರೆಯಲಿದೆ, ಬರುವ ದಿನಗಳಲ್ಲಿ ಕೃಷಿಗಾಗಿ ನೀರಿನ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ: ಮಹದಾಯಿ ಯೋಜನೆ ಡಿಪಿಆರ್ಗೆ ಕೇಂದ್ರದ ಅನುಮತಿ: ಮೋದಿ, ಶಾಗೆ ಅಭಿನಂದನೆ ಸಲ್ಲಿಸಿದ ಸಿಎಂ ಬೊಮ್ಮಾಯಿ