ಹುಬ್ಬಳ್ಳಿ: ಮದುವೆ ಅಂದ್ರೆ ಹಾರ ಬದಲಾಯಿಸಿಕೊಳ್ಳುವುದು, ಮಾಂಗಲ್ಯ ಧಾರಣೆ ಮಾಡುವುದು ಸಾಮಾನ್ಯ. ಆದ್ರೆ ಇಲ್ಲಿ ಎರಡು ಜೋಡಿಗಳು ಮಾಸ್ಕ್ ಬದಲಾಯಿಸಿಕೊಳ್ಳುವ ಮೂಲಕ ವಿಭಿನ್ನವಾಗಿ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ.
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುವುದರಿಂದ ಹುಬ್ಬಳ್ಳಿಯ ಉದಯ ನಗರದಲ್ಲಿರುವ ಸೋಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಗಾಣಿಗೇರ ಬಂಧುಗಳ ಮದುವೆ ಸಂಭ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧುವರರು ಪರಸ್ಪರ ಮಾಸ್ಕ್ ಹಾಕುವ ಮೂಲಕ ಜಾಗೃತಿ ಮೂಡಿಸಿದರು.
ಶಿವರಾಜ್, ಪ್ರಶಾಂತಿನಿ ಹಾಗೂ ಸುನೀಲ್, ಸುಪ್ರಿಯಾ ಜೋಡಿಗಳು ಸಂಪ್ರದಾಯ ಎಂಬಂತೆ ಮದುವೆಯಲ್ಲಿ ಮಾಸ್ಕ್ ಬದಲಾವಣೆ ಮಾಡಿರುವುದು ವಿಶೇಷವಾಗಿದೆ. ಈ ಮೂಲಕ ಪ್ರಸ್ತುತ ದಿನಮಾನಗಳಲ್ಲಿ ಮಾಸ್ಕ್ ಬಳಕೆ ಅನಿವಾರ್ಯವಾಗಿದೆ ಎಂಬುವುದನ್ನು ನವ ಜೋಡಿಗಳು ಬಿಂಬಿಸಿದ್ದಾರೆ.