ಧಾರವಾಡ: ಕೋವಿಡ್‍ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ಮೌಖಿಕವಾಗಿ ಕೆಲವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದು, ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 202 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಅವರಲ್ಲಿ ಈಗಾಗಲೇ 90 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಕೋವಿಡ್‍ಗೆ ಸಂಬಂಧಿಸಿದ ಅಧಿಕೃತ ಮಾಹಿತಿಯನ್ನು ಜಿಲ್ಲಾಡಳಿತದಿಂದ, ಸಚಿವರಿಂದ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಲಾಗುತ್ತದೆ. ಈ ಕುರಿತು ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಪ್ರಕಾರ ಶಿಕ್ಷೆ ವಿಧಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.